ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 7 ರಿಂದ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೊದಲು 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಫೈನಲ್ ರೇಸ್ನಲ್ಲಿ ಉಳಿಯಲಿದೆ.
ಟೀಮ್ ಇಂಡಿಯಾ ಫೈನಲ್ ಲೆಕ್ಕಾಚಾರ:
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.
- ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
- ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
- ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.
ಅಂದರೆ ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಶ್ರೀಲಂಕಾ ದುರ್ಬಲ ತಂಡ ಎನ್ನಬಹುದು.
ಹೀಗಾಗಿಯೇ ಶ್ರೀಲಂಕಾ ವಿರುದ್ಧದ 2 ಮ್ಯಾಚ್ಗಳಲ್ಲೂ ಭಾರತ ತಂಡ ಗೆಲ್ಲಲೇಬೇಕು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಲ್ಲಿ ಉಳಿಯಬಹುದು.
ಸರಣಿ ಯಾವಾಗ ಶುರು?
ಆಗಸ್ಟ್ 4 ರಂದು ಕೊಲಂಬೋ ತಲುಪಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಸ್ಥಳೀಯ ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಸುದೀರ್ಘ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ 2 ಟೆಸ್ಟ್ ಮ್ಯಾಚ್ಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…
ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:
ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ಮ್ಯಾಚ್ಗಳ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 26 ರಿಂದ ಶುರುವಾಗಲಿದ್ದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ.