T20 World Cup 2025: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದರೆ, ಶ್ರೀಲಂಕಾ ತಂಡವು ಎಲಿಮಿನೇಟ್ ಆಗಿದೆ. ಇದೀಗ ದ್ವಿತೀಯ ತಂಡವಾಗಿ ಸೆಮಿಫೈನಲ್ಗೇರಲು ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವುದು ಇಂಗ್ಲೆಂಡ್ ಎಂಬುದು ವಿಶೇಷ.
ಅಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಮಣಿಸಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ದೊರೆಯಲಿದೆ. ಹೀಗಾಗಿ ಪಾಕ್ ತಂಡವು ಇಂಗ್ಲೆಂಡ್ ತಂಡದ ಗೆಲುವನ್ನು ಎದುರು ನೋಡಲಿದೆ.
ಒಂದು ವೇಳೆ ಇಂಗ್ಲೆಂಡ್ ತಂಡ ಗೆದ್ದರೂ ಪಾಕಿಸ್ತಾನ್ ತಂಡಕ್ಕೆ ನೇರವಾಗಿ ಸೆಮಿಫೈನಲ್ಗೇರಲು ಅವಕಾಶ ದೊರೆಯುವುದಿಲ್ಲ. ಬದಲಾಗಿ ಶ್ರೀಲಂಕಾ ವಿರುದ್ಧ ಅಮೋಘ ಜಯ ಸಾಧಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಲೇಬೇಕು. ಹಾಗಿದ್ರೆ ಪಾಕ್ ತಂಡದ ಸೆಮಿಫೈನಲ್ ಹಾದಿಯ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ…
- ನೆಟ್ ರನ್ ರೇಟ್: ಫೆಬ್ರವರಿ 27 ರಂದು ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಸೋಲಿಸಲೇಬೇಕು. ಆಗ ನ್ಯೂಜಿಲೆಂಡ್ 3 ಅಂಕಗಳಲ್ಲೇ ಉಳಿಯುತ್ತದೆ. ನಂತರ ಫೆಬ್ರವರಿ 28 ರಂದು ಪಾಕಿಸ್ತಾನವು ಶ್ರೀಲಂಕಾವನ್ನು ಸೋಲಿಸಿದರೆ, ಪಾಕಿಸ್ತಾನ್ ಕೂಡ 3 ಅಂಕಗಳನ್ನು ಪಡೆಯುತ್ತದೆ.
- ಸವಾಲು: ನ್ಯೂಝಿಲೆಂಡ್ ತಂಡವು ಅತ್ಯುತ್ತಮ NRR (+3.050) ಹೊಂದಿದೆ. ಪಾಕಿಸ್ತಾನವು (-0.461) ಇದನ್ನು ಮೀರಿಸಲು ಸುಮಾರು 70 ರಿಂದ 80 ರನ್‌ಗಳ ಅಂತರದ ಗೆಲುವು ಸಾಧಿಸಬೇಕಾಗುತ್ತದೆ.
- ಉದಾಹರಣೆ: ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ತಂಡವನ್ನು 40 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಸುಮಾರು 30 ರನ್‌ಗಳಿಂದ ಗೆಲ್ಲಬೇಕು (ಪಾಕಿಸ್ತಾನ್ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ).
- ಅರ್ಹತೆ: ನ್ಯೂಝಿಲೆಂಡ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು, ಪಾಕಿಸ್ತಾನವು ಶ್ರೀಲಂಕಾವನ್ನು ಭಾರಿ ಅಂತರದಿಂದ ಸೋಲಿಸಿದರೆ ಮಾತ್ರ ನೆಟ್ ರನ್ ರೇಟ್ ಆಧಾರದಲ್ಲಿ 2ನೇ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಪಾಕ್ ತಂಡದ ಚೇಸಿಂಗ್ ಲೆಕ್ಕಾಚಾರ:
ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ನ್ಯೂಝಿಲೆಂಡ್ ತಂಡವನ್ನು ಸುಮಾರು 40 ರನ್‌ಗಳಿಂದ ಸೋಲಿಸಿದೆ ಎಂದು ಭಾವಿಸೋಣ. ಆಗ ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಈ ಕೆಳಗಿನ ಚೇಸಿಂಗ್ ಟಾರ್ಗೆಟ್ ಇರಲಿದೆ.
- ಓವರ್‌ಗಳ ಲೆಕ್ಕಾಚಾರ: ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 160 ರನ್ ಗಳಿಸಿದರೆ, ಪಾಕಿಸ್ತಾನವು ಆ ಗುರಿಯನ್ನು ಸುಮಾರು 12.2 ರಿಂದ 13 ಓವರ್‌ಗಳಲ್ಲೇ ಬೆನ್ನಟ್ಟಬೇಕಾಗುತ್ತದೆ.
- ಗುರಿಯ ಅಂತರ: ಪಾಕಿಸ್ತಾನವು ಕೇವಲ ಗೆದ್ದರೆ ಸಾಲದು, ಪಂದ್ಯದ ಒಟ್ಟು ಓವರ್‌ಗಳ ಪೈಕಿ ಕನಿಷ್ಠ 35-40% ಓವರ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ತಲುಪಬೇಕು.
- ಉದಾಹರಣೆ: ಶ್ರೀಲಂಕಾ ನೀಡಿದ ಗುರಿಯನ್ನು ಪಾಕಿಸ್ತಾನವು 40 ರಿಂದ 45 ಎಸೆತಗಳು ಬಾಕಿ ಇರುವಾಗಲೇ ತಲುಪಿದರೆ ಮಾತ್ರ ನ್ಯೂಝಿಲೆಂಡ್‌ನ ರನ್ ರೇಟ್ ಅನ್ನು ಹಿಂದಿಕ್ಕಲು ಸಾಧ್ಯವಾಗುತ್ತದೆ.
ಅಂದರೆ ರನ್‌ಗಳ ಅಂತರದ ಗೆಲುವಿನ ಲೆಕ್ಕಾಚಾರ ನೋಡುವುದಾದರೆ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಲು ಪಾಕಿಸ್ತಾನ್ ಕನಿಷ್ಠ 70 ರನ್‌ಗಳ ಅಂತರದಿಂದ ಗೆಲ್ಲಬೇಕು. ಇನ್ನು ಓವರ್‌ಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ 12 ರಿಂದ 13 ಓವರ್ಗಳಲ್ಲಿ 160 ರನ್‌ಗಳ ಗುರಿ ಬೆನ್ನತ್ತಬೇಕು. ಅಂದರೆ ಕನಿಷ್ಠ 40 ರಿಂದ 45 ಎಸೆತಗಳು ಬಾಕಿ ಇರುವಂತೆ ಪಾಕಿಸ್ತಾನ್ ತಂಡ ಗೆದ್ದರೆ ಮಾತ್ರ ನೆಟ್ ರನ್ ರೇಟ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಬಹುದು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಎಷ್ಟು ದೊಡ್ಡ ಅಂತರದಿಂದ ಸೋಲಿಸುತ್ತದೆಯೋ, ಪಾಕಿಸ್ತಾನ ತಂಡಕ್ಕೆ ಚೇಸಿಂಗ್ ಮಾಡುವುದು ಅಷ್ಟು ಸುಲಭವಾಗುತ್ತದೆ. ಅಂದರೆ ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತರೆ ನೆಟ್ ರನ್ ರೇಟ್ ಕುಸಿತವಾಗಲಿದೆ. ಇದರಿಂದ ಪಾಕ್ ತಂಡದ ಟಾರ್ಗೆಟ್ ಕೂಡ ಬದಲಾಗಲಿದೆ.
ಇದನ್ನೂ ಓದಿ: ಹೀಗಾದ್ರೆ ಸೌತ್ ಆಫ್ರಿಕಾ ಕೂಡ ವಿಶ್ವಕಪ್‌ನಿಂದ ಹೊರ ಬೀಳಬಹುದು!
ಪಾಕಿಸ್ತಾನ್ ಯಾವಾಗ ಹೊರಬೀಳುತ್ತದೆ?
- ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ಅನ್ನು ಸೋಲಿಸಿದರೆ ಪಾಕ್ ತಂಡ ಟೂರ್ನಿಯಿಂದ ಹೊರಬೀಳಲಿದೆ.
- ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೂ ಕೂಡ ಪಾಕಿಸ್ತಾನ್ ತಂಡ ವಿಶ್ವಕಪ್‌ನಿಂದ ಹೊರಬೀಳಲಿದೆ.
- ಶ್ರೀಲಂಕಾ ವಿರುದ್ಧ ಸೋತರೆ ಅಥವಾ ಆ ಪಂದ್ಯ ಮಳೆಯಿಂದ ರದ್ದಾದರೆ ಪಾಕ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.