ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 183 ರನ್ ಕಲೆಹಾಕಿದೆ. ತಂಡ ಈ ಬೃಹತ್ ಮೊತ್ತ ಕಲೆಹಾಕುವಲ್ಲಿ ಆಲ್‌ರೌಂಡರ್ ರಾಧಾ ಯಾದವ್ ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಆರ್ಸಿಬಿ ಕೇವಲ 43 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟಿಂಗ್ಗೆ ಬಂದ ರಾಧಾ, ರಿಚಾ ಜೊತೆ ಉತ್ತಮ ಜೊತೆಯಾಟ ಕಟ್ಟಿದರು.
ಈ ಜೋಡಿ ಐದನೇ ವಿಕೆಟ್ಗೆ 66 ಎಸೆತಗಳಲ್ಲಿ 105 ರನ್ಗಳ ಜೊತೆಯಾಟವನ್ನಾಡಿ ತಂಡವನ್ನು 148 ರನ್ಗಳಿಗೆ ಕೊಂಡೊಯ್ಯಿತು. ಈ ಹಂತದಲ್ಲಿ ರಿಚಾ ಘೋಷ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರೆ, ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರು. ಇದು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಧಾ ಯಾದವ್ ಅವರ ಚೊಚ್ಚಲ ಅರ್ಧಶತಕವಾಗಿದೆ. ಈ ಇಬ್ಬರನ್ನು ಹೊರತುಪಡಿಸಿ ನಾಡಿನ್ ಡಿ ಕ್ಲರ್ಕ್ 12 ಎಸೆತಗಳಲ್ಲಿ 26 ರನ್ ಗಳಿಸಿದರು.