ರಸ್ತೆ ಸಂಚಾರದ ಬಗ್ಗೆ ಯಮರಾಜನಿಂದ ಜಾಗೃತಿImage Credit source: tv9 kannada
ದೇವನಹಳ್ಳಿ, ಫೆಬ್ರವರಿ 01: ಏರ್ಪೋರ್ಟ್ ರಸ್ತೆ (Airport Road) ನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ 24 ಗಂಟೆಯೂ ಫುಲ್ ಬ್ಯುಸಿಯಾಗಿರುವ ನಗರದ ಪ್ರಮುಖ ರಸ್ತೆ. ಹೀಗಾಗಿ ಈ ರಸ್ತೆಯಲ್ಲಿ ನೂರಾರು ಅಪಘಾತಗಳು, ಹತ್ತಾರು ಜನರ ಸಾವುಗಳು (deacth) ಸಂಭವಿಸುತ್ತಿದ್ದರು ವಾಹನ ಸವಾರರು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಂಚಾರ ನಿಯಮ ತಿಳಿಸುವುದಕ್ಕೆ ಅಂತ ಸ್ವತಃ ಯಮರಾಜನೇ ರಸ್ತೆಗಿಳಿದಿದ್ದು, ಸವಾರರಿಗೆ ಎಚ್ಚರಿಕೆ ನೀಡಿದ್ದಾನೆ.
ಚಿತ್ರಗುಪ್ತ ಮತ್ತು ಯಮರಾಜರಿಂದ ಸಂಚಾರ ಜಾಗೃತಿ
ವೀಕೆಂಡ್ ಮೂಡ್ನಲ್ಲಿ ಜಾಲಿ ರೈಡ್ಗೆ ಅಂತ ರಸ್ತೆಗಿಳಿಯುತ್ತಿದ್ದವರಿಗೆ ಯಾವಾಗಲೂ ಸಂಚಾರಿ ಪೊಲೀಸರು ಎದುರಾಗ್ತಿದ್ದರು. ಆದರೆ ಇಂದು ಮಾತ್ರ ಸಂಚಾರಿ ಪೊಲೀಸರ ಬದಲಿಗೆ ಸ್ವತಃ ಚಿತ್ರಗುಪ್ತ ಮತ್ತು ಯಮರಾಜ ಪ್ರತ್ಯಕ್ಷವಾಗಿ ಸಂಚಾರ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ಏರ್ಲೈನ್ಸ್ ಸಿಬ್ಬಂದಿಯ ಬಂಧನ
ಅಂದಹಾಗೆ ದೇವನಹಳ್ಳಿ ಬಳಿ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣವಾದ ನಂತರ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೆ ಬರ್ತಿದ್ದು, ನಿತ್ಯ ನಡೆಯುವ ಅಪಘಾತಗಳಿಂದ ಜನರು ಕೈ-ಕಾಲು ಮುರಿದುಕೊಳ್ಳುವುದರ ಜೊತೆಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಇಂದು ಸ್ವತಃ ಯಮ ವೇಷಧಾರಿ ಹಾಗೂ ಚಿತ್ರಗುಪ್ತರು ರಸ್ತೆಗಿಳಿದಿದ್ದು, ಟೋಲ್ ಬಳಿ ಬಂದ ವಾಹನ ಸವಾರರಿಗೆ ಬುದ್ಧಿವಾದ ಹೇಳಿದರು.
ದೇವನಹಳ್ಳಿಯ ಏರ್ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರನ್ನ ಅಡ್ಡಗಟ್ಟಿದ ಯಮ ಹಾಗೂ ಚಿತ್ರಗುಪ್ತ ವಾಹನ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ರಕ್ಷಣೆ ಇಲ್ಲದೆ ಕಳಪೆ ಹಾಫ್ ಹೆಲ್ಮೆಟ್ ಹಾಕಿ ಸಂಚಾರ ಮಾಡುತ್ತಿದ್ದ ಜನರಿಗೆ ಬುದ್ದಿವಾದ ಹೇಳಿದರು. ಪೊಲೀಸರು ಕೇವಲ ದಂಡ ವಿಧಿಸುತ್ತಾರೆ, ನಾನು ನೇರವಾಗಿ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಜೀವ ಮುಖ್ಯ ಸುರಕ್ಷಿತ ಹೆಲ್ಮೆಟ್ ಧರಿಸಿ ಅಂತ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಬಿತ್ತಿ ಪತ್ರಗಳನ್ನ ನೀಡಿ ಅರಿವು ಮೂಡಿಸಿದರು.
50ಕ್ಕೂ ಅಧಿಕ ಜನರು ಸಾವು
ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳಿಂದ ಸಾಯುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಕಳೆದ 2025ರಲ್ಲಿ ಯಲಹಂಕದಿಂದ ದೇವನಹಳ್ಳಿವರೆಗೆ 25 ಕಿ.ಮೀ ದೂರದಲ್ಲಿ ನೂರಕ್ಕೂ ಅಧಿಕ ಗಂಭೀರ ಅಪಘಾತಗಳಾಗಿದ್ದು, 50ಕ್ಕೂ ಅಧಿಕ ಜನರು ಸಾವನ್ನಪಿದ್ದರೆ, ನೂರಾರು ಜನ ಕೈ-ಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದ್ದು, ಕಾರು ಚಾಲಕರು ಸೀಟ್ ಬೆಲ್ಟ್ ಮತ್ತು ಬೈಕ್ ಸವಾರರು ಮುಂಭಾಗ ಹಾಗೂ ಹಿಂಭಾಗ ಪ್ರಯಾಣಿಕರು ಐಎಸ್ಐ ಗುಣಮಟ್ಟದ ಹೆಲ್ಮೆಟ್ ಧರಿಸಿ ಸಂಚಾರ ಮಾಡುವಂತೆ ತಿಳಿಸಿದರು.
ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ದಟ್ಟ ಮಂಜು: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಲಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಒಟ್ಟಾರೆ ಏರ್ಪೋರ್ಟ್ ರಸ್ತೆಯಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಾವು-ನೋವುಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇನ್ನೂ ಅತೀ ವೇಗ ಹಾಗೂ ಅಪಘಾತಗಳನ್ನ ತಡೆಗಟ್ಟಲು ಎಐ ಕ್ಯಾಮರಾ ಸೇರಿದಂತೆ ಕಟ್ಟುನಿಟ್ಟಿನ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದ್ದು ಇನ್ನಾದರೂ ಸವಾರರು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.