ವಿಪಕ್ಷ ನಾಯಕ ಅಶೋಕ್ ಗಂಭೀರ ಆರೋಪImage Credit source: tv9
ಬೆಂಗಳೂರು, ಫೆಬ್ರವರಿ 3: ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಅವರು ಅಬಕಾರಿ ಇಲಾಖೆಯಲ್ಲಿ (Excise department) ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿ, ಅದಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ ತಮ್ಮ ಬಳಿ ಇದೆ ಎಂದರು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಪೆನ್ಡ್ರೈವ್ ಅನ್ನೂ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರದರ್ಶಿಸಿದ ಅವರು, ಸರ್ಕಾರ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ‘ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆದಿದೆ’ ಎಂದಿದ್ದಾರೆ. ಅವರ ಹೇಳಿಕೆಯೇ ಅಬಕಾರಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ಅಶೋಕ್ ಹೇಳಿದರು. ತಿಮ್ಮಾಪುರ ಅವರಿಗೆ ಪಾಲು ಕೊಡಬೇಕೆಂಬ ಆಡಿಯೋ ವೈರಲ್ ಆಗಿದೆ ಎಂದು ಹೇಳಿದ ಅಶೋಕ್, ಆ ಆಡಿಯೋ ದಾಖಲೆ ಪೆನ್ಡ್ರೈವ್ನಲ್ಲಿ ಇದೆ ಎಂದು ಸದನಕ್ಕೆ ತಿಳಿಸಿದರು.
ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಹಾಗೂ ವಕೀಲ ರಮೇಶ್ ನಡುವಿನ ಮಾತುಕತೆಯ ವಿವರ ಪೆನ್ಡ್ರೈವ್ನಲ್ಲಿ ಇದೆ ಎಂದು ಅಶೋಕ್ ಆರೋಪಿಸಿದರು. ಆಡಿಯೋದಲ್ಲಿ ನಾಗರಾಜಪ್ಪ ಅವರು 18 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. ಸಚಿವರು ಅಥವಾ ಅವರ ಮಗನ ಕಡೆಯಿಂದ ಸಂದೇಶ ಬಂದ ನಂತರವೇ ಕೆಲಸ ಆಗುತ್ತದೆ ಎಂದು ನಾಗರಾಜಪ್ಪ ಹೇಳಿರುವುದೂ ಆಡಿಯೋದಲ್ಲಿ ಇದೆ ಎಂದು ಅಶೋಕ್ ವಿವರಿಸಿದರು.
ಅಶೋಕ್ ಮಾತಿನ ವಿಡಿಯೋ ಇಲ್ಲಿ ನೋಡಿ
ಇನ್ನೂ ಅಬಕಾರಿ ಅಂಗಡಿಗಳಿಂದ ಪ್ರತೀ ತಿಂಗಳು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿ ಅಂಗಡಿಯಿಂದ ತಿಂಗಳಿಗೆ 10ರಿಂದ 15 ಸಾವಿರ ರೂ. ಸಂಗ್ರಹಿಸಲಾಗುತ್ತಿದೆ ಎಂದರು. ಈ ಮೂಲಕ ತಿಂಗಳಿಗೆ ಒಟ್ಟು ಸುಮಾರು 21 ಕೋಟಿ ರೂ. ಹಾಗೂ ವರ್ಷಕ್ಕೆ 252 ಕೋಟಿ ರೂ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅಂಕಿಅಂಶ ಸಮೇತ ಆರೋಪಿಸಿದರು.
ಇದನ್ನೂ ಓದಿ: ಸಚಿವರ ಬುಡಕ್ಕೆ ಅಬಕಾರಿ ಡಿಸಿ ಲಂಚ ಪ್ರಕರಣ: ಆರ್ಬಿ ತಿಮ್ಮಾಪುರಗೆ ಸಂಕಷ್ಟ
ಮದ್ಯದ ಅಂಗಡಿಗಳಿಗೆ ಪ್ರತೀ ತಿಂಗಳು ಕಮಿಷನ್ ಮೊತ್ತವನ್ನು ಫಿಕ್ಸ್ ಮಾಡಲಾಗಿದೆ ಎಂದು ಹೇಳಿದ ಆರ್.ಅಶೋಕ್, ಈ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಅವರ ಆರೋಪಗಳಿಂದಾಗಿ ವಿಧಾನಸಭೆಯಲ್ಲಿ ಕೆಲಕಾಲ ತೀವ್ರ ಗದ್ದಲವೂ ಉಂಟಾಯಿತು.