Headlines

ದಾಂಡಿಗರ ಆರ್ಭಟ: ವಿಶ್ವ ದಾಖಲೆಯ ಮೊತ್ತ ಪೇರಿಸಿದ ಐರ್ಲೆಂಡ್ – Kannada News | Ireland Batters Creates New World Record in T20 World Cup 2026

ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಐರ್ಲೆಂಡ್ ತಂಡವು ಬರೋಬ್ಬರಿ 235 ರನ್​ ಕಲೆಹಾಕಿದೆ. ಈ ಬೃಹತ್ ಮೊತ್ತದೊಂದಿಗೆ ಐರಿಷ್ ಪಡೆ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಚೊಚ್ಚಲ ಟಿ20 ವಿಶ್ವಕಪ್​ ಬಳಿಕ ಯಾವುದೇ ತಂಡ 230+ ಸ್ಕೋರ್​ಗಳಿಸಿರಲಿಲ್ಲ. ಇದೀಗ ಒಮಾನ್ ವಿರುದ್ಧ ಐರ್ಲೆಂಡ್ ದಾಂಡಿಗರು ಆರ್ಭಟಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲಂಬೊದ ಎಸ್​ಎಸ್​ಸಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ಉತ್ತಮ ಆರಂಭವೇನು ಪಡೆದಿರಲಿಲ್ಲ. ಆರಂಭಿಕರಾದ ಟಿಮ್ ಟೆಕ್ಟರ್ (5), ರೋಸ್ ಅಡೈರ್ (14) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ ಕೂಡ 14 ರನ್​ಗಳಿಸಿ ಔಟಾಗಿದ್ದರು.

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಲೋರ್ಕನ್ ಟಕರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಅಬ್ಬರ ಶುರು ಮಾಡಿದ ಟಕರ್ ಒಮಾನ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಟಕರ್ ಬ್ಯಾಟ್​ನಿಂದ 51 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 94 ರನ್ ಮೂಡಿಬಂತು.

ಇನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಗ್ಯಾರೆತ್ ಡೆಲಾನಿ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 56 ರನ್ ಚಚ್ಚಿದರು. ಹಾಗೆಯೇ ಜಾರ್ಜ್​ ಡಾಕ್ರೆಲ್ 9 ಎಸೆತಗಳಲ್ಲಿ 5 ಸಿಕ್ಸರ್​ನೊಂದಿಗೆ 35 ರನ್ ಸಿಡಿಸಿದರು. ಈ ಸಿಡಿಲಬರಬ್ಬದ ಬ್ಯಾಟಿಂಗ್​ನೊಂದಿಗೆ ಐರ್ಲೆಂಡ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 235 ರನ್ ಕಲೆಹಾಕಿತು.

ಐರ್ಲೆಂಡ್ ವಿಶ್ವ ದಾಖಲೆ:

235 ರನ್​ಗಳೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್​ ಗಳಿಸಿದ ಅಸೋಸಿಯೇಟ್ ನೇಷನ್ ತಂಡ ಎಂಬ ವಿಶ್ವ ದಾಖಲೆ ಐರ್ಲೆಂಡ್ ಪಾಲಾಯಿತು.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಕಲೆಹಾಕಿದ ವಿಶ್ವದ 2ನೇ ತಂಡ ಎಂಬ ಹೆಗ್ಗಳಿಕೆಯನ್ನು ಕೂಡ ಐರ್ಲೆಂಡ್ ತನ್ನದಾಗಿಸಿಕೊಂಡಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಶ್ರೀಲಂಕಾ. ಲಂಕಾ ಪಡೆ 2007 ರ ಟಿ20 ವಿಶ್ವಕಪ್​ನಲ್ಲಿ 260 ರನ್ ಪೇರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಹೀಗಾದಲ್ಲಿ ಟಿ20 ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್..!

ಇದೀಗ ಐರ್ಲೆಂಡ್ ತಂಡವು 235 ರನ್​ ಕಲೆಹಾಕುವ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್ ಇತಿಹಾಸದಲ್ಲೇ 230+ ರನ್ ಕಲೆಹಾಕಿದ ವಿಶ್ವದ 2ನೇ ತಂಡವೆಂಬ ಹೆಗ್ಗಳಿಕೆಯನ್ನು ಐರ್ಲೆಂಡ್ ತಮ್ಮದಾಗಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *