Headlines

ಕಾಂಗ್ರೆಸ್ ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತೇ ವಿನಃ ಅಭಿವೃದ್ಧಿಗೆ ಗಮನ ಕೊಡಲಿಲ್ಲ; ಪ್ರಧಾನಿ ಮೋದಿ ಟೀಕೆ – Kannada News | PM Narendra Modi slams Congress for neglecting Assam in Guwahati poll rally

ಗುವಾಹಟಿ, ಫೆಬ್ರವರಿ 14: ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಬೃಹತ್ ಸಾರ್ವಜನಿಕ ರ‍್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸಿತು, ರಕ್ಷಣಾ ಒಪ್ಪಂದಗಳಲ್ಲಿ ಭ್ರಷ್ಟಾಚಾರ ಮಾಡಿತು, ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು, ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಿತು ಎಂದು ಮೋದಿ (PM Modi in Assam) ಆರೋಪಿಸಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಭಾರತವನ್ನು ವಲಸಿಗರ ಕೈಗೆ ಒಪ್ಪಿಸಲು ಮುಂದಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್ ಭಾರತವನ್ನು ವಿಭಜಿಸಿತ್ತು. ಇಂದು ಕಾಂಗ್ರೆಸ್ ಮುಸ್ಲಿಂ ಲೀಗ್-ಮಾವೋವಾದಿ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ. ಅದು ಭಾರತವನ್ನು ವಿಭಜಿಸುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಅಸ್ಸಾಂನಲ್ಲಿ ಅಸ್ಥಿರತೆ ಉಂಟಾಗಿತ್ತು. ಬಿಜೆಪಿ ಅದನ್ನು ಬದಲಾಯಿಸಿತು. ನಾನು ಅಸ್ಸಾಂನಲ್ಲಿ ಅಭಿವೃದ್ಧಿಯ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಬಿಜೆಪಿ ಅಸ್ಸಾಂನ ಚಿತ್ರಣವನ್ನೇ ಬದಲಾಯಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆ ಘಟನೆಯಲ್ಲಿ ಜೀವ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್ ಬಗ್ಗೆಯೂ ಮಾತನಾಡಿದ ಮೋದಿ, “ಭಯೋತ್ಪಾದಕ ಬೆದರಿಕೆಗಳಿಗೆ ಪ್ರತಿಕ್ರಿಯಿಸುವಲ್ಲಿ ಭಾರತ ತನ್ನ ಸಂಕಲ್ಪವನ್ನು ಪ್ರದರ್ಶಿಸಿದೆ. ಆದರೆ, ಕಾಂಗ್ರೆಸ್​​ನ ಸುದೀರ್ಘ ಆಡಳಿತದಲ್ಲಿ ಅದು ಈ ರೀತಿಯ ಧೈರ್ಯದ ನಿರ್ಧಾರಗಳನ್ನು ಎಂದೂ ತೆಗೆದುಕೊಳ್ಳಲಿಲ್ಲ” ಎಂದು ಹೇಳಿದರು.

ಅಸ್ಸಾಂಗೆ ಕೇಂದ್ರದ ಬಜೆಟ್ ಹಂಚಿಕೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ ಈ ವರ್ಷ ಅಸ್ಸಾಂ ತನ್ನ ತೆರಿಗೆ ಪಾಲಾಗಿ 50,000 ಕೋಟಿ ರೂ.ಗಳನ್ನು ಪಡೆಯಲಿದೆ ಎಂದು ಹೇಳಿದರು. “ಈ ಬಜೆಟ್ ಈಶಾನ್ಯ ರಾಜ್ಯಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವತ್ತ ಹೆಚ್ಚು ಗಮನಹರಿಸುತ್ತದೆ. ಈ ವರ್ಷ, ಅಸ್ಸಾಂ ತನ್ನ ತೆರಿಗೆ ಪಾಲಾಗಿ ಸುಮಾರು 50,000 ಕೋಟಿ ರೂ.ಗಳನ್ನು ಪಡೆಯಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಸ್ಸಾಂ ಹೇಗೆ ಹಸಿವಿನಿಂದ ಬಳಲುತ್ತಿತ್ತು ಎಂಬುದನ್ನು ನಾವು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಸ್ಸಾಂ ಕೇವಲ 10,000 ಕೋಟಿ ರೂ.ಗಳನ್ನು ತೆರಿಗೆ ಪಾಲಾಗಿ ಪಡೆದುಕೊಂಡಿತ್ತು. ಈಗ ಬಿಜೆಪಿ ಸರ್ಕಾರದ ಅಡಿಯಲ್ಲಿ, ಅಸ್ಸಾಂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಡೆದಿದ್ದಕ್ಕಿಂತ 5 ಪಟ್ಟು ಹೆಚ್ಚು ಹಣವನ್ನು ಪಡೆಯುತ್ತಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ವಿಮಾನ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಸ್ಸಾಂ

“ಕಳೆದ 11 ವರ್ಷಗಳಲ್ಲಿ ಅಸ್ಸಾಂ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದಿಂದ 5.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಪಡೆದಿದೆ. ಅಸ್ಸಾಂನಲ್ಲಿ ಹೆದ್ದಾರಿಗಳು ಮತ್ತು ರಸ್ತೆ ಯೋಜನೆಗಳಿಗೆ ಸಾವಿರಾರು ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ, ಸುಧಾರಿತ ಸಂಪರ್ಕವು ಉದ್ಯೋಗ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಈಶಾನ್ಯ ರಾಜ್ಯಗಳು ಅಷ್ಟಲಕ್ಷ್ಮಿ ದೇವತೆಗಳಿದ್ದಂತೆ” ಎಂದು ಮೋದಿ ಬಣ್ಣಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Sat, 14 February 26

Source link

Leave a Reply

Your email address will not be published. Required fields are marked *