ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠImage Credit source: tv9
ಬೆಂಗಳೂರು, ಫೆಬ್ರವರಿ 16: ಕರ್ನಾಟಕದಲ್ಲಿ (Karnataka) ನ್ಯಾಯಾಂಗ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ (Bomb Threat) ಸಂದೇಶಗಳು ಬಂದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿ ನ್ಯಾಯಾಲಯ ಸಮುಚ್ಚಯಕ್ಕೆ ಅನಾಮಧೇಯ ವ್ಯಕ್ತಿ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದು, ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಿದರು. ಬಳಿಕ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಇದೇ ರೀತಿ ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಅಪರಿಚಿತ ವ್ಯಕ್ತಿಯಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಮಿಳುನಾಡು ಮೂಲದ ವ್ಯಕ್ತಿಯಿಂದ ಜಡ್ಜ್ ಅವರ ಇ-ಮೇಲ್ ಐಡಿಗೆ ಮಧ್ಯಾಹ್ನ 12.30ಕ್ಕೆ ಆರ್ಡಿಎಕ್ಸ್ ಬಾಂಬ್ ಸ್ಫೋಟವಾಗಲಿದೆ ಎಂದು ತಿಳಿಸಲಾಗಿತ್ತು. ಮಾಹಿತಿ ತಿಳಿದ ತಕ್ಷಣ ನ್ಯಾಯಾಧೀಶರು ಮತ್ತು ಸಿಬ್ಬಂದಿ ಕೋರ್ಟ್ನಿಂದ ಹೊರಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಹೈಕೋರ್ಟ್ ಧಾರವಾಡ ಪೀಠಕ್ಕೆ ಮತ್ತೆ ಬಾಂಬ್ ಬೆದರಿಕೆ
ಮತ್ತೊಂದೆಡೆ, ಹೈಕೋರ್ಟ್ ಧಾರವಾಡ ಪೀಠಕ್ಕೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಆತಂಕ ಸೃಷ್ಟಿಸಿದೆ. ಇ-ಮೇಲ್ ಮೂಲಕ ಬಂದ ಸಂದೇಶದ ಹಿನ್ನೆಲೆ ವಕೀಲರು ಕೋರ್ಟ್ನಿಂದ ಹೊರಬಂದಿದ್ದು, ಗರಗ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಒಂದು ತಿಂಗಳ ಹಿಂದೆಯೂ ಇದೇ ರೀತಿಯ ಬೆದರಿಕೆ ಸಂದೇಶ ಬಂದಿತ್ತು.
ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಸಹ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಹುಸಿ ಬೆದರಿಕೆಗಳಾಗಿದ್ದರೂ, ಭದ್ರತಾ ದೃಷ್ಟಿಯಿಂದ ಪೊಲೀಸರು ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸುತ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ವಕೀಲರ ಸಂಘಗಳು ಆಗ್ರಹಿಸಿವೆ.
ವರದಿ: ಗೋಪಾಲ್ ಎಎಸ್, ನರಸಿಂಹ ಮೂರ್ತಿ ಪ್ಯಾಟಿ, ಬಸವರಾಜ್ ದೊಡ್ಮನಿ