ನಿಸ್ಸಾಂಕ ಅಜೇಯ ಶತಕ; ಲಂಕಾ ವಿರುದ್ಧ ಸೋತ ಆಸ್ಟ್ರೇಲಿಯಾಕ್ಕೆ ಸೂಪರ್ 8 ಹಾದಿ ಕಠಿಣ – Kannada News | T20 World Cup 2026: Sri Lanka Stuns Australia, Qualifies for Super 8 from Pallekele

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆದ 2026 ರ ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸೂಪರ್ 8 ಸುತ್ತಿಗೇರುವ ದೃಷ್ಟಿಕೋನದಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹಳ ಮುಖ್ಯವಾಗಿತ್ತು. ಅದರಲ್ಲೂ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾಕ್ಕೆ ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 181 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆದರೆ ಆಸೀಸ್ ಬೌಲರ್‌ಗಳನ್ನು ಹೈರಾಣಾಗಿಸಿದ ಲಂಕಾ ಬ್ಯಾಟರ್​ಗಳು ಆಸೀಸ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಈ ಗೆಲುವಿನೊಂದಿಗೆ ಲಂಕಾ ತಂಡ ಸೂಪರ್ 8ಸುತ್ತಿಗೆ ಅರ್ಹತೆ ಪಡೆದರೆ, ಆಸೀಸ್ ತಂಡ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

ಆಸ್ಟ್ರೇಲಿಯಾಕ್ಕೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಈ ಜೋಡಿ ಕೇವಲ 8.3 ಓವರ್​ಗಳಲ್ಲಿ ಮೊದಲ ವಿಕೆಟ್‌ಗೆ 104 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಆದ್ದರಿಂದ ಆಸೀಸ್ ಪಡೆ 200 ಕ್ಕೂ ಹೆಚ್ಚು ರನ್‌ ಕಲೆಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ. ಈ ಜೋಡಿ ಪೆವಿಲಿಯನ್ ಸೇರಿಕೊಂಡ ನಂತರ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಸಿಯಿತು.

ಲಂಕಾ ಬೌಲರ್​ಗಳ ಮ್ಯಾಜಿಕ್

ಜೋಶ್ ಇಂಗ್ಲಿಸ್ 27 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್​ಗೆ ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ಯಾಮರೂನ್ ಗ್ರೀನ್ 3, ಟಿಮ್ ಡೇವಿಡ್ 6, ಮಾರ್ಕಸ್ ಸ್ಟೊಯಿನಿಸ್ 4, ಕೂಪರ್ ಕಾನೊಲಿ 3, ಕ್ಸೇವಿಯರ್ ಬಾರ್ಟ್ಲೆಟ್ 0 ಮತ್ತು ಆಡಮ್ ಜಂಪಾ 1 ರನ್ ಗಳಿಸಿ ಔಟಾದರು. ಲಂಕಾ ಪರ ದಶುನ್ ಹೇಮಂತ 3 ವಿಕೆಟ್ ಮತ್ತು ದುಶ್ಮಂತ ಚಮೀರಾ 2 ವಿಕೆಟ್ ಪಡೆದರು.

ನಿಸ್ಸಾಂಕ ಅಜೇಯ ಶತಕ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 8 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕುಶಾಲ್ ಪೆರೆರಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಆ ನಂತರ ಜೊತೆಯಾದ ಪಾಥುಮ್ ನಿಸ್ಸಂಕಾ ಮತ್ತು ಕುಶಾಲ್ ಮೆಂಡಿಸ್ ತಂಡದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್‌ಗೆ 97 ರನ್‌ಗಳ ಪಾಲುದಾರಿಕೆಯನ್ನು ನೀಡಿತು. ಕುಶಾಲ್ ಮೆಂಡಿಸ್ 51 ರನ್ ಗಳಿಸಿ ಔಟಾದರು. ನಂತರ ಪವನ್ ರತ್ನಾಯಕೆ ಅವರೊಂದಿಗೆ ಪಾಥುಮ್ ಇನ್ನಿಂಗ್ಸ್ ತಂಡವನ್ನು ಗೆಲುವಿನ ಕೊಂಡೊಯ್ಯುವ ಕೆಲಸ ಮಾಡಿದರು. ಈ ಜೋಡಿ ಅಜೇಯವಾಗಿ ಉಳಿದ ತಂಡಕ್ಕೆ ಜಯ ತಂದುಕೊಟ್ಟಿತು. ಪಾಥುಮ್ ನಿಸ್ಸಂಕಾ 52 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಅವರ ಇನ್ನಿಂಗ್ಸ್​ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.

ಈ ಗೆಲುವಿನೊಂದಿಗೆ, ಶ್ರೀಲಂಕಾ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಪೈಪೋಟಿ ನಡೆಸುತ್ತಿವೆ. ಆದರೆ ಆಸ್ಟ್ರೇಲಿಯಾಕ್ಕಿಂತ ಜಿಂಬಾಬ್ವೆಗೆ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಜಿಂಬಾಬ್ವೆ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ, ಅದು ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 pm, Mon, 16 February 26

Source link

Leave a Reply

Your email address will not be published. Required fields are marked *