ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆದ 2026 ರ ಟಿ20 ವಿಶ್ವಕಪ್ನ 30ನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸೂಪರ್ 8 ಸುತ್ತಿಗೇರುವ ದೃಷ್ಟಿಕೋನದಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹಳ ಮುಖ್ಯವಾಗಿತ್ತು. ಅದರಲ್ಲೂ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾಕ್ಕೆ ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 181 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆದರೆ ಆಸೀಸ್ ಬೌಲರ್ಗಳನ್ನು ಹೈರಾಣಾಗಿಸಿದ ಲಂಕಾ ಬ್ಯಾಟರ್ಗಳು ಆಸೀಸ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಈ ಗೆಲುವಿನೊಂದಿಗೆ ಲಂಕಾ ತಂಡ ಸೂಪರ್ 8ಸುತ್ತಿಗೆ ಅರ್ಹತೆ ಪಡೆದರೆ, ಆಸೀಸ್ ತಂಡ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.
ಆಸ್ಟ್ರೇಲಿಯಾಕ್ಕೆ ಸ್ಫೋಟಕ ಆರಂಭ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಈ ಜೋಡಿ ಕೇವಲ 8.3 ಓವರ್ಗಳಲ್ಲಿ ಮೊದಲ ವಿಕೆಟ್ಗೆ 104 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಆದ್ದರಿಂದ ಆಸೀಸ್ ಪಡೆ 200 ಕ್ಕೂ ಹೆಚ್ಚು ರನ್ ಕಲೆಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ. ಈ ಜೋಡಿ ಪೆವಿಲಿಯನ್ ಸೇರಿಕೊಂಡ ನಂತರ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಸಿಯಿತು.
ಲಂಕಾ ಬೌಲರ್ಗಳ ಮ್ಯಾಜಿಕ್
ಜೋಶ್ ಇಂಗ್ಲಿಸ್ 27 ಮತ್ತು ಗ್ಲೆನ್ ಮ್ಯಾಕ್ಸ್ವೆಲ್ 22 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್ಮನ್ಗೆ ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ಯಾಮರೂನ್ ಗ್ರೀನ್ 3, ಟಿಮ್ ಡೇವಿಡ್ 6, ಮಾರ್ಕಸ್ ಸ್ಟೊಯಿನಿಸ್ 4, ಕೂಪರ್ ಕಾನೊಲಿ 3, ಕ್ಸೇವಿಯರ್ ಬಾರ್ಟ್ಲೆಟ್ 0 ಮತ್ತು ಆಡಮ್ ಜಂಪಾ 1 ರನ್ ಗಳಿಸಿ ಔಟಾದರು. ಲಂಕಾ ಪರ ದಶುನ್ ಹೇಮಂತ 3 ವಿಕೆಟ್ ಮತ್ತು ದುಶ್ಮಂತ ಚಮೀರಾ 2 ವಿಕೆಟ್ ಪಡೆದರು.
ನಿಸ್ಸಾಂಕ ಅಜೇಯ ಶತಕ
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 8 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕುಶಾಲ್ ಪೆರೆರಾ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಆ ನಂತರ ಜೊತೆಯಾದ ಪಾಥುಮ್ ನಿಸ್ಸಂಕಾ ಮತ್ತು ಕುಶಾಲ್ ಮೆಂಡಿಸ್ ತಂಡದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್ಗೆ 97 ರನ್ಗಳ ಪಾಲುದಾರಿಕೆಯನ್ನು ನೀಡಿತು. ಕುಶಾಲ್ ಮೆಂಡಿಸ್ 51 ರನ್ ಗಳಿಸಿ ಔಟಾದರು. ನಂತರ ಪವನ್ ರತ್ನಾಯಕೆ ಅವರೊಂದಿಗೆ ಪಾಥುಮ್ ಇನ್ನಿಂಗ್ಸ್ ತಂಡವನ್ನು ಗೆಲುವಿನ ಕೊಂಡೊಯ್ಯುವ ಕೆಲಸ ಮಾಡಿದರು. ಈ ಜೋಡಿ ಅಜೇಯವಾಗಿ ಉಳಿದ ತಂಡಕ್ಕೆ ಜಯ ತಂದುಕೊಟ್ಟಿತು. ಪಾಥುಮ್ ನಿಸ್ಸಂಕಾ 52 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ಗಳು ಸೇರಿದ್ದವು.
ಈ ಗೆಲುವಿನೊಂದಿಗೆ, ಶ್ರೀಲಂಕಾ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಪೈಪೋಟಿ ನಡೆಸುತ್ತಿವೆ. ಆದರೆ ಆಸ್ಟ್ರೇಲಿಯಾಕ್ಕಿಂತ ಜಿಂಬಾಬ್ವೆಗೆ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಜಿಂಬಾಬ್ವೆ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ, ಅದು ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:34 pm, Mon, 16 February 26
