ಹಿಂದೂ ಧರ್ಮದಲ್ಲಿ, ಅದರಲ್ಲೂ ಶಿವನ ಆರಾಧನೆಯಲ್ಲಿ, ಬಿಲ್ವಪತ್ರೆಯು ಪವಿತ್ರ ಸ್ಥಾನವನ್ನು ಪಡೆದಿದೆ. ಬಿಲ್ವಾಷ್ಟಕಂನಲ್ಲಿ “ಏಕಬಿಲ್ವಂ ಶಿವಾರ್ಪಣಂ” ಎಂದು ಹೇಳುವಂತೆ, ಶಿವನಿಗೆ ಒಂದು ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಲಭಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ಬಿಲ್ವಪತ್ರೆಯು ಮೂರು ಎಲೆಗಳನ್ನು, ಅಂದರೆ ಮೂರು ದಳಗಳನ್ನು ಹೊಂದಿರುತ್ತದೆ, ಇದು ತ್ರಿಗುಣಗಳ (ಸತ್ವ, ರಜೋ, ತಮೋಗುಣ) ಮತ್ತು ಶಿವನ ತ್ರಿನೇತ್ರಗಳ ಪ್ರತೀಕವಾಗಿದೆ. “ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ” ಎಂಬ ಶ್ಲೋಕ ಇದರ ಮಹತ್ವವನ್ನು ಸಾರುತ್ತದೆ. ಬಿಲ್ವಪತ್ರೆಯ ಪೂಜೆಯಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ, ಇದು ಭಕ್ತಿ ಮತ್ತು ಶ್ರದ್ಧೆಯ ಫಲವಾಗಿದೆ. ಮಹಾಲಕ್ಷ್ಮಿ ದೇವಿಯು ಈ ತ್ರಿದಳಗಳಲ್ಲಿ ವಾಸವಾಗಿರುತ್ತಾಳೆ ಎಂದು ಹೇಳಲಾಗುತ್ತದೆ.
ಬಿಲ್ವಪತ್ರೆಯನ್ನು ಅರ್ಪಿಸುವಾಗ ಕೆಲವು ನಿಯಮಗಳಿವೆ. ಎಲೆಗಳು ಹರಿದಿರಬಾರದು ಮತ್ತು ಶುದ್ಧವಾಗಿ ನೀರಿನಿಂದ ತೊಳೆದಿರಬೇಕು. ಒಣಗಿದ ಬಿಲ್ವಪತ್ರೆಯನ್ನೂ ಹಲವು ದಿನಗಳವರೆಗೆ ಪೂಜೆಗೆ ಬಳಸಬಹುದು. ಚತುರ್ದಶಿ, ಅಷ್ಟಮಿ, ಅಮಾವಾಸ್ಯೆ, ಸಂಕ್ರಾಂತಿ ಮತ್ತು ಮಹಾಶಿವರಾತ್ರಿಯಂದು ಶಿವನ ಲಹರಿಗಳು ಅಧಿಕವಾಗಿರುವುದರಿಂದ ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದು ಹೆಚ್ಚು ಮಂಗಳಕರ. ಮಹಾಶಿವರಾತ್ರಿಯಂದು ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ ಪ್ರತಿ ಕ್ಷಣವೂ ಭಗವಂತನ ಅವಿರ್ಭಾವ ಇರುತ್ತದೆ.
ಇದನ್ನೂ ಓದಿ: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ
ಬಿಲ್ವಪತ್ರೆಯ ಆವಿರ್ಭಾವಕ್ಕೆ ಸಂಬಂಧಿಸಿದಂತೆ ಶಿವಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ಹಲವು ಕಥೆಗಳಿವೆ. ಒಂದು ಕಥೆಯ ಪ್ರಕಾರ, ಪಾರ್ವತಿ ದೇವಿಯು ಮಂದಾರ ಪರ್ವತದ ಮೇಲೆ ಕಠೋರ ತಪಸ್ಸು ಮಾಡುತ್ತಿದ್ದಾಗ, ಆಕೆಯ ಬೆವರಿನಿಂದ ಬಿಲ್ವ ವೃಕ್ಷ ಉದ್ಭವಿಸಿತು. ಈ ವೃಕ್ಷದ ಬೇರಿನಲ್ಲಿ ಗಿರಿಜಾದೇವಿ, ಕಾಂಡದಲ್ಲಿ ಮಹೇಶ್ವರಿ, ಕೊಂಬೆಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ಪಾರ್ವತಿ, ಹೂವುಗಳಲ್ಲಿ ಗೌರಿ ಮತ್ತು ಹಣ್ಣುಗಳಲ್ಲಿ ಕಾತ್ಯಾಯಿನಿ ದೇವಿಯು ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮತ್ತೊಂದು ಕಥೆಯು, ಮಹಾಲಕ್ಷ್ಮಿಯ ತಪಸ್ಸಿನಿಂದ ಶಿವನು ಮೆಚ್ಚಿ ಈ ಬಿಲ್ವಪತ್ರೆಯನ್ನು ಉದ್ಭವಿಸಿದನು ಎಂದು ಹೇಳುತ್ತದೆ. ಶುಕಮುನಿಗಳ ಕಥೆಯಲ್ಲಿ, ಬೇಟೆಗೆ ಹೋದ ಬೇಡನೊಬ್ಬ ಅರಿವಿಲ್ಲದೆ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಿ ಪುಣ್ಯ ಗಳಿಸಿದ ಪ್ರಸಂಗವೂ ಇದೆ.
ಬಿಲ್ವಪತ್ರೆಯನ್ನು ನಿಯಮಿತವಾಗಿ, ವಿಶೇಷವಾಗಿ ಸೋಮವಾರಗಳಂದು, ಮಾಸಿಕ ಶಿವರಾತ್ರಿಯಂದು ಅಥವಾ ಶಿವನಾಮ ಸ್ಮರಣೆಯೊಂದಿಗೆ ಅರ್ಪಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:14 am, Tue, 17 February 26