ಬೆಂಗಳೂರು, ಫೆಬ್ರವರಿ 19: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಕಸದ (Garbage) ಸಮಸ್ಯೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸದ ವಿಲೇವಾರಿಯಲ್ಲಿ ಸಾಲು ಕಟ್ಟಿ ನಿಂತಿರುವಂತಹ ಕಸದ ಲಾರಿಗಳು. ಈ ಬಗ್ಗೆ ನಿನ್ನೆ ಟಿವಿ9 ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಜೊತೆಗೆ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಎಂದಿನಂತೆ ಲಾರಿಗಳು ಕಸ ವಿಲೇವರಿಗೆ ಮುಂದಾಗಿವೆ.
ಬೆಂಗಳೂರಿನ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಬಳಿಯ ಕ್ವಾರಿಗೆ ಕಸ ಡಂಪ್ ಮಾಡದಂತೆ ಬೆಳ್ಳಳ್ಳಿ ಗ್ರಾಮಸ್ಥರು ನಿರ್ಬಂಧಿಸಿದ್ದರು. ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ನಿಲ್ಲಿಸಿ ಯಾವುದೇ ಕಸದ ಲಾರಿ ಡಂಪಿಂಗ್ ಯಾರ್ಡ್ಗೆ ಪ್ರವೇಶಿಸದಂತೆ ತಡೆದಿದ್ದರು. ಇನ್ನು ಸರಿ ಸುಮಾರು 100ಕ್ಕೂ ಹೆಚ್ಚು ಕಸದ ಲಾರಿಗಳು ಈ ರೋಡ್ನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದವು. ಈ ಬಗ್ಗೆ ಟಿವಿ9 ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನ ಹರಿಸಿ ಸ್ಥಳೀಯರನ್ನು ಮನವಲಿಸುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂದ್ ಆಗುತ್ತಾ ಕಸ ಸಂಗ್ರಹಣೆ? ಡಂಪಿಂಗ್ ಯಾರ್ಡ್ಗಳಲ್ಲಿ ಕಸದ ಲಾರಿಗಳಿಗೆ ದಿಗ್ಬಂಧನ
ಬೆಳ್ಳಳ್ಳಿ ಡಂಪಿಂಗ್ ಯಾರ್ಡ್ಗೆ ಕಸ ಡಂಪ್ ಮಾಡುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆ ಸೇರಿದಂತೆ ಸಾಕಷ್ಟು ತೊಂದರೆ ಆಗುತ್ತಿತ್ತು. ಜೊತೆಗೆ ಓಡಾಡಲು ಸರಿಯಾದ ರಸ್ತೆ ಸಹ ಇಲ್ಲ, ಹೀಗಾಗಿ ಈ ಹಿಂದೆ ಅಂದರೆ ಸರಿಸುಮಾರು 7-8 ತಿಂಗಳ ಹಿಂದೆ ಕೂಡ ಪ್ರತಿಭಟನೆ ಮಾಡಿದ್ದ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಹಣ ಬಿಡುಗಡೆ ಮಾಡಲಾಗುತ್ತೆ ಎಂಬ ಭರವಸೆಯನ್ನ ಅಂದಿನ ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ನಿನ್ನೆ ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆ ತಡೆದ ಬೆನ್ನಲ್ಲೇ ಘನ ತ್ಯಾಜ್ಯ ನಿರ್ವಹಣಾ ಘಟಕದ ಸಿಇಓ ಕರಿ ಗೌಡ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳೀಯರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ರಾಜಕೀಯ ಗುದ್ದಾಟ
ಇನ್ನು ಬೆಂಗಳೂರಿನಲ್ಲಿ ಕಸದ ಡಂಪಿಂಗ್ ಸಮಸ್ಯೆ ಉದ್ಭವವಾಗುತ್ತಿದ್ದಂತೆ ಕಸದ ವಿಚಾರವಾಗಿ ರಾಜಕೀಯ ಕೂಡ ಜೋರಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಆಕ್ರೋಶ ಹೊರಹಾಕುತ್ತಿದ್ದು, ಬೆಂಗಳೂರಿನ ಕಸವನ್ನ ಎತ್ತುವ ಯೋಗ್ಯತೆಯೂ ಇವರಿಗಿಲ್ಲ. ಇನ್ನೆರಡು ದಿನ ಕಳೆದರೆ ಗಾರ್ಬೇಜ್ ಸಿಟಿ ಆಗಲಿದೆ. ಗುತ್ತಗೆದಾರರಿಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಸದ್ಯ ಇದಕ್ಕೆಲ್ಲಾ ಇದೀಗ ತೆರೆಬಿದ್ದಂತಾಗಿದೆ.
ಒಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಕಸ ವಿಲೇವಾರಿಯನ್ನ ಮಾಡೋದಕ್ಕೆ ಅಲ್ಲಿನ ಸ್ಥಳೀಯ ಜನರು ವಿರೋಧಿಸಿದ್ದರು. ಮತ್ತೊಂದು ಕಡೆ ಬೆಳ್ಳಳ್ಳಿ ಕಸ ವಿಲೇವಾರಿ ಘಟಕದ ಗ್ರಾಮಸ್ಥರು ಪ್ರತಿಭಟನೆಗೆ ಮಣಿದ ಜಿಬಿಎ ಹಣ ಬಿಡುಗಡೆಗೆ ಮುಂದಾಗಿದ್ದು, ಇದೀಗ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಂತ್ತಾಗಿದೆ.
ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.