ಎಐ ಸಮ್ಮಿಟ್ನಲ್ಲಿ ಅರೆಬೆತ್ತಲೆ ಪ್ರತಿಭಟನೆ: ಯುವ ಕಾಂಗ್ರೆಸ್ ನಾಯಕರಿಗೆ ಮಾರ್ಗರೇಟ್ ಆಳ್ವಾ ಶಿಸ್ತಿನ ಪಾಠImage Credit source: TV9 Network and IANS
ಬೆಂಗಳೂರು, ಫೆಬ್ರವರಿ 23: ‘ಇಂಡಿಯಾ ಎಐ ಸಮ್ಮಿಟ್ (India AI Summit)’ ಸಂದರ್ಭ ಯುವ ಕಾಂಗ್ರೆಸ್ (Youth Congress) ನಾಯಕರು ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದಕ್ಕೆ ವಿಪಕ್ಷಗಳ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದೀಗ ಖುದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ (Margaret Alva) ಅವರೇ ಯುವ ಕಾಂಗ್ರೆಸ್ ನಾಯಕರ ನಡೆಯನ್ನು ಖಂಡಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಅತ್ಯಂತ ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ‘ಇಂಡಿಯಾ ಎಐ ಸಮ್ಮಿಟ್’ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆನಗ್ನ ಪ್ರತಿಭಟನೆ ಕುರಿತು ಉದ್ಭವಿಸಿರುವ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಅವರು, ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಘನತೆ, ಶಿಸ್ತು ಮತ್ತು ಜವಾಬ್ದಾರಿ ಇರಬೇಕು ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆ ಸಂದರ್ಭ ಭಾರತ ಯುವ ಕಾಂಗ್ರೆಸ್ ಸದಸ್ಯರು ಶರ್ಟ್‌ಗಳನ್ನು ಬಿಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಮಾರ್ಗೆರೇಟ್ ಆಳ್ವಾ ಮಾತಿನ ವಿಡಿಯೋ
Bengaluru, Karnataka: On the Youth Congress protest at the India AI Summit, veteran Congress leader and former Union Minister Margaret Alva says, “I think at international events there has to be dignity, there has to be discipline, and there has to be a sense of responsibility” pic.twitter.com/9et4obYslZ
— IANS (@ians_india) February 22, 2026
ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಬಂಡವಾಳಗಾರರ ಗಮನಸೆಳೆದ ಕಾರ್ಯಕ್ರಮವಾಗಿತ್ತು. ಆ ಸಂದರ್ಭದಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆ ವೇಳೆ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ನರಸಿಂಹ ಅವರನ್ನು ಪೊಲೀಸರು ಬಂಧಿಸಿದ್ದರು.
ಇನ್ನೊಂದೆಡೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಹ ಯುವ ಕಾಂಗ್ರೆಸ್ ನಾಯಕರ ಅರೆನಗ್ನ ಪ್ರತಿಭಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಎಐ ಶೃಂಗಸಭೆ ವೇಳೆ ನಡೆದಿದ್ದೇನು?
ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿನ 10 ಮಂದಿ ನಾಯಕರು ಏಕಾಏಕಿ ತಾವು ತೊಟ್ಟಿದ್ದ ಶರ್ಟನ್ನು ಕಳಚಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಇದನ್ನೂ ಓದಿ: ‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್ಗೆ ಪ್ರಧಾನಿ ಮೋದಿ ತರಾಟೆ
ಈ ಬಗ್ಗೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ಪಕ್ಷದ ಕೊಳಕು ಮತ್ತು ಬೆತ್ತಲೆ ರಾಜಕಾರಣ ಹಾಗೂ ಆ ಪಕ್ಷ ತಾತ್ವಿಕವಾಗಿ ಅದೆಷ್ಟು ದಿವಾಳಿ ಎದ್ದಿದೆ ಎಂಬುದನ್ನು ಈ ಪ್ರತಿಭಟನೆ ತೋರಿಸಿಕೊಟ್ಟಿದೆ ಎಂದು ಮೋದಿ ಹೇಳಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:04 pm, Mon, 23 February 26