ಮಗಳಿಗೆ ಅಪ್ಪನೆಂದರೆ (father) ವಿಶೇಷ ಪ್ರೀತಿ, ಗೌರವ. ಆಕೆಯ ಪಾಲಿಗೆ ಅಪ್ಪನೇ ಸೂಪರ್ ಹೀರೋ. ತಂದೆಗೂ ಅಷ್ಟೆ ಮುದ್ದಿನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಮಗಳನ್ನು ಪ್ರೀತಿಸುವ, ಮುದ್ದಿಸುವುದರ ಜೊತೆ ಜೊತೆಗೆ ತಂದೆ ಹಲವಾರು ಜೀವನ ಮೌಲ್ಯಗಳನ್ನು ಸಹ ಕಲಿಸುತ್ತಾನೆ. ಹೆಣ್ಣು ಮಕ್ಕಳು ತಮ್ಮ ತಂದೆ ಕಲಿಸಿಕೊಡುವ ಜೀವನ ಮೌಲ್ಯಗಳನ್ನು ಮಾತ್ರವಲ್ಲ, ತಮ್ಮ ತಂದೆಯ ಗುಣಗಳನ್ನು ಸಹ ಕಲಿಯುತ್ತಾರಂತೆ. ಹೆಣ್ಣು ಮಕ್ಕಳು ತಮ್ಮ ತಂದೆಯಿಂದ ಕಲಿಯುವ ಅ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಮಗಳಾದವಳು ತನ್ನ ಅಪ್ಪನಿಂದ ಕಲಿಯುವ ಗುಣಗಳಿವು:
ದಿಟ್ಟ ನಿರ್ಧಾರ: ತಂದೆ ನೀಡುವ ಸ್ವಾತಂತ್ರ್ಯ ಮತ್ತು ನಂಬಿಕೆಯು ಮಗಳಿಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ದಿಟ್ಟ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಸಹ ಆಕೆ ತಂದೆಯನ್ನು ನೋಡಿಯೇ ಕಲಿಯುತ್ತಾಳೆ.
ಕಠಿಣ ಪರಿಶ್ರಮ: ತನ್ನ ತಂದೆಯ ಕಠಿಣ ಪರಿಶ್ರಮವನ್ನು ನೋಡಿ ಮಗಳು ಕಷ್ಟಪಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಕಲಿಯುತ್ತಾಳೆ. ತನ್ನ ತಂದೆಯಂತೆಯೇ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುತ್ತಾಳೆ.
ಒಳ್ಳೆಯ ನಡವಳಿಕೆ: ತಂದೆಯ ನಡವಳಿಕೆಯನ್ನೇ ಮಕ್ಕಳು ಸಹ ಕಲಿಯುವುದು. ಇದು ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿಯೊಬ್ಬ ತಂದೆಯೂ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು.
ಗೌರವ: ಇತರರು ತನ್ನ ತಂದೆಗೆ ನೀಡುವ ಗೌರವ, ಹಾಗೂ ತಂದೆ ಇತರರನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ನೋಡಿ ತಾನು ಹಿರಿಯರಿಗೆ ಗೌರವ ಕೊಡಬೇಕು ಎಂಬುದನ್ನು ಕಲಿಯುತ್ತಾಳೆ. ತಂದೆಯಂತೆ ಸಮಾಜದಲ್ಲಿ ಗೌರವವನ್ನು ಗಳಿಸಲು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರಿತಳಾಗುತ್ತಾಳೆ.
ಆತ್ಮವಿಶ್ವಾಸ: ಪ್ರತಿ ಹೆಣ್ಣು ಮಕ್ಕಳು ಸಹ ತಮ್ಮ ತಂದೆಯಂತೆ ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕುವುದು ಹೇಗೆ, ಕಷ್ಟಗಳನ್ನು ಎದುರಿಸಿ ನಿಲ್ಲುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಒಟ್ಟಿನಲ್ಲಿ ತಂದೆಯ ಆತ್ಮವಿಶ್ವಾಸವೇ ಮಗಳ ಬದುಕಿಗೆ ಪ್ರೇರಣೆ.
ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಈ ಅಂಶಗಳೇ ಮುಖ್ಯ ಕಾರಣ
ಕುಟುಂಬದ ಮೇಲಿನ ಪ್ರೀತಿ: ತಂದೆಯಾದವನು ತನ್ನ ತಂದೆತಾಯಿ, ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಂಡರೆ, ಮಗಳು ಸಹ ತಂದೆಯಂತೆ ತನ್ನ ಕುಟುಂಬಕ್ಕೆ ಪ್ರೀತಿ ನೀಡುತ್ತಾಳೆ, ಕುಟುಂಬದ ಪ್ರಾಮುಖ್ಯತೆಯನ್ನು ಕಲಿಯುತ್ತಾಳೆ.
ಭಾವನೆಗಳ ಮೇಲಿನ ನಿಯಂತ್ರಣ: ತಾಯಿಗಿಂತ ತಂದೆಗೆ ತನ್ನ ಭಾವನೆಗಳ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಈ ಮೂಲಕ ಮಗಳು ಯಾವುದೇ ಪರಿಸ್ಥಿತಿಯನ್ನು ತನ್ನ ತಂದೆ ಹೇಗೆ ಕೂಲ್ ಆಗಿ ನಿಭಾಯಿಸುತ್ತಾರೆ ಎಂಬುದುನ್ನು ನೋಡುತ್ತಾಳೆ. ಯಾವುದೇ ಪರಿಸ್ಥಿತಿಯನ್ನು ತಾಳ್ಮೆಯಿಂದ ಹೇಗೆ ನಿಭಾಯಿಸುವುದು ಎಂಬುದನ್ನು ಸಹ ಆಕೆ ಕಲಿಯುತ್ತಾಳೆ.
ನಿಜವಾದ ಪ್ರೀತಿ: ತಂದೆ ತೋರುವ ನಿಸ್ವಾರ್ಥ ಪ್ರೀತಿ ಮಗಳ ಭವಿಷ್ಯದ ಸಂಬಂಧಕ್ಕೆ ಸ್ಫೂರ್ತಿ ನೀಡುತ್ತದೆ. ಆಕೆ ತನ್ನ ತಂದೆಯಂತೆ ಪ್ರೀತಿ, ಕಾಳಜಿ ತೋರುವ ಜೀವನ ಸಂಗಾತಿಯನ್ನೇ ಆರಿಸಲು ಬಯಸುತ್ತಾಳೆ. ಒಟ್ಟಾರೆಯಾಗಿ ಆಕೆಗೆ ತನ್ನ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ