ಅಲ್ಲು ಅರ್ಜುನ್ (Allu Arjun) ಅವರ ಸಹೋದರ ಅಲ್ಲು ಸಿರೀಶ್ ಮದುವೆ ಆಗುತ್ತಿದ್ದಾರೆ. ಆದರೆ ಮದುವೆಗೆ ಮುನ್ನ ಪಾರ್ಟಿಗಳ ಮೇಲೆ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದಾರೆ ಅಲ್ಲು ಸಿರೀಶ್. ಇತ್ತೀಚೆಗಷ್ಟೆ ವಿದೇಶದಲ್ಲಿ ಕ್ರೂಸ್ ಒಂದರಲ್ಲಿ ಅದ್ಧೂರಿ ಪಾರ್ಟಿ ಮಾಡಿದರು. ಪಾರ್ಟಿಯಲ್ಲಿ ಅಲ್ಲು ಅರ್ಜುನ್ ಸಹ ಭಾಗವಹಿಸಿದ್ದರು. ಅದಾದ ಬಳಿಕ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ಸಹೋದರ ಅಲ್ಲು ಸಿರೀಶ್ ಅವರಿಗಾಗಿ ಪಾರ್ಟಿ ಆಯೋಜಿಸಿದ್ದರು. ಮದ್ಯ, ನೃತ್ಯ ಎಲ್ಲವೂ ಇದ್ದ ಪಾರ್ಟಿ ಇದಾಗಿತ್ತು. ಆದರೆ ಈ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಅದೂ ಅಯ್ಯಪ್ಪ ಮಾಲಧಾರಿಯಾಗಿ!
ಹೌದು, ಅಲ್ಲು ಅರ್ಜುನ್, ಸಹೋದರನಿಗಾಗಿ ಆಯೋಜಿಸಿದ್ದ ಕಾಕ್ಟೇಲ್ ಪಾರ್ಟಿಯಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ರಾಮ್ ಚರಣ್ ಪಾರ್ಟಿಯಲ್ಲಿ ಭಾಗಿ ಆಗಿರುವ ವಿಡಿಯೋವನ್ನು ಸಹ ಅಲ್ಲು ಸಿರೀಶ್ ಹಂಚಿಕೊಂಡಿದ್ದಾರೆ. ಆದರೆ ರಾಮ್ ಚರಣ್, ಅಯ್ಯಪ್ಪ ಮಾಲಧಾರಿಯಾಗಿ ಮದ್ಯದ ಪಾರ್ಟಿಯಲ್ಲಿ ಭಾಗಿ ಆಗಿದ್ದರ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾಗಿಯೂ ಅಲ್ಲಿ ನಡೆದಿದ್ದೇನು ಎಂಬುದನ್ನು ಅಲ್ಲು ಸಿರೀಶ್ ವಿವರಿಸಿದ್ದಾರೆ.
ಮಾಲಧಾರಿಯಾಗಿ ರಾಮ್ ಚರಣ್ ಪಾರ್ಟಿಯಲ್ಲಿ ಭಾಗವಹಿಸಿದ ಬಗ್ಗೆ ಪ್ರಶ್ನೆಗಳು ಎದ್ದಂತೆ, ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲು ಸಿರೀಶ್, ‘ಸ್ವಾಮಿಯವರು (ರಾಮ್ ಚರಣ್) ಯಾರೂ ಸಹ ಮದ್ಯವನ್ನು ಮುಟ್ಟುವ ಮೊದಲೇ ಅವರು ಬಂದು ಶುಭ ಹಾರೈಸಿ ಹೊರಟು ಬಿಟ್ಟರು’ ಎಂದಿದ್ದಾರೆ. ಆ ಮೂಲಕ ಪಾರ್ಟಿಯ ಆರಂಭದಲ್ಲೇ ಬಂದ ರಾಮ್ ಚರಣ್ ಎಲ್ಲರಿಗೂ ಶುಭ ಹಾರೈಸಿ ಹೊರಟಿದ್ದಾರೆ ಆ ಮೂಲಕ ಅವರು ಮಾಲಧಾರಿಯಾಗಿ ಯಾವುದೇ ಕೆಟ್ಟ ಚಟುವಟಿಕೆಯ ಭಾಗ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ
ಅಲ್ಲು ಸಿರೀಶ್ ಅವರು ರಾಮ್ ಚರಣ್ ಅವರಿಗೆ ಸ್ವಂತ ಮಾವನ ಮಗ ಇಬ್ಬರದ್ದೂ ಬಹಳ ಹತ್ತಿರದ ಸಂಬಂಧದ ಕುಟುಂಬ. ಅಲ್ಲು ಅರ್ಜುನ್ ಮತ್ತು ಅಲ್ಲು ಸಿರೀಶ್ ಅವರ ತಂದೆ, ರಾಮ್ ಚರಣ್ ತಾಯಿಯ ಸ್ವಂತ ಸಹೋದರ. ಹಾಗಾಗಿ ಮದುವೆ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿ ಆಗುವ ಒತ್ತಡ ಇದ್ದೇ ಇದೆ. ಅಲ್ಲದೆ ರಾಮ್ ಚರಣ್ ಮತ್ತು ಅಲ್ಲು ಸಹೋದರರು ಚಿಕ್ಕಂದಿನಿಂದಲೂ ಬಹಳ ಆಪ್ತರು.
ರಾಮ್ ಚರಣ್ ಮಹಾನ್ ಅಯ್ಯಪ್ಪ ಭಕ್ತರಾಗಿದ್ದಾರೆ. ಪದೇ ಪದೇ ಅವರು ಮಾಲಧಾರಣೆ ಮಾಡುತ್ತಲೇ ಇರುತ್ತಾರೆ. ಮಾಲಧಾರಣೆ ಮಾಡಿದಾಗ ಚಪ್ಪಲಿ ಸಹ ಧರಿಸದೆ ಬಹಳ ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಸಿನಿಮಾ ಪ್ರಚಾರವಿರಲಿ ಏನೇ ಇರಲಿ ನಿಯಮಗಳನ್ನು ತಪ್ಪಿಸುವುದಿಲ್ಲ. ಅಯ್ಯಪ್ಪನ ಮಹಾನ್ ಭಕ್ತರಾಗಿರುವ ರಾಮ್ ಚರಣ್, ಮಾಲೆಗೆ ಅಪಚಾರ ಆಗುವಂತೆ ನಡೆದುಕೊಳ್ಳುತ್ತಾರೆ ಎನ್ನಲಾಗದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:45 am, Wed, 25 February 26