T20 World Cup 2026: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಅಭಿಯಾನ ಅಂತ್ಯವಾಗಿದೆ. ಪಾಕ್ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಗೆದ್ದರೂ ನೆಟ್ ರನ್ ರೇಟ್ನಲ್ಲಿ ಹಿಂದೆ ಉಳಿಯುವ ಮೂಲಕ ಪಾಕಿಸ್ತಾನ್ ತಂಡ ವಿಶ್ವಕಪ್ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 212 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 147 ರನ್ಗಳಿಗೆ ನಿಯಂತ್ರಿಸಿದ್ದರೆ ಪಾಕಿಸ್ತಾನ್ ತಂಡಕ್ಕೆ ನೆಟ್ ರನ್ ರೇಟ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ಗೇರುವ ಅವಕಾಶವಿತ್ತು. ಆದರೆ ಶ್ರೀಲಂಕಾ ಬರೋಬ್ಬರಿ 207 ರನ್ಗಳಿಸಿ ಕೇವಲ 5 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಅತ್ತ ಈ ಪಂದ್ಯದಲ್ಲಿ ಗೆದ್ದರೂ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಈ ಪಂದ್ಯದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಟಾಸ್ ಸೋತಾಗಲೇ ಇಬ್ಬನಿಯ ಸವಾಲು ಎದುರಾಗಿತ್ತು. ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕಷ್ಟಕರ. ಹೀಗಾಗಿ ಶ್ರೀಲಂಕಾ ತಂಡವನ್ನು 148 ರನ್ಗಳಿಗೆ ನಿರ್ಬಂಧಿಸುವುದು ಯಾವಾಗಲೂ ಸವಾಲೇ ಆಗಿರುತ್ತದೆ.
ಒಂದು ವೇಳೆ ನಾವು ಟಾಸ್ ಗೆದ್ದಿದ್ದರೆ, ಕಥೆನೇ ಬೇರೆದಾಗಿರುತ್ತಿತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ದ್ವಿತೀಯ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ್ದರಿಂದ ಇಬ್ಬನಿಯ ಕಾರಣ ನಮ್ಮ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಇದಾಗ್ಯೂ ಸಾಹಿಬ್ಝಾದ ಫರ್ಹಾನ್ ಮಾತ್ರ ಅದ್ಭುತ ಪ್ರದರ್ಶನ ನೀಡಿದ್ದರು. ಅವರೊಂದಿಗೆ ಬೇರೊಬ್ಬ ಬ್ಯಾಟರ್ ಉತ್ತಮ ಸಾಥ್ ನೀಡಿದ್ದಿದ್ದರೆ ಕೆಲ ಪಂದ್ಯಗಳು ನಮ್ಮ ಪರವಾಗುತ್ತಿತ್ತು. ಆದರೆ ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.
ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್ಗೆ 12 ತಂಡಗಳು ಆಯ್ಕೆ
ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ತನ್ನೆಲ್ಲಾ ಪಂದ್ಯಗಳನ್ನಾಡುವ ಮೂಲಕ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿನಲ್ಲಿ ಕೇವಲ ಒಂದು ಮ್ಯಾಚ್ ಮಾತ್ರ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ವಿಶ್ವಕಪ್ನಿಂದ ಹೊರಬಿದ್ದಿರುವ ಪಾಕ್ ಪಡೆ ಮಾರ್ಚ್ 2ನೇ ವಾರದಿಂದ ಬಾಂಗ್ಲಾದೇಶ್ ವಿರುದ್ಧ ಸರಣಿ ಆಡಲಿದೆ.