ಟಾಸ್ ಗೆದ್ದಿದ್ರೆ ಕಥೆನೇ ಬೇರೆ ಇರುತ್ತಿತ್ತು..! – Kannada News | Salman ali agha post match presentation of pak vs sl match

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಅಭಿಯಾನ ಅಂತ್ಯವಾಗಿದೆ. ಪಾಕ್ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಗೆದ್ದರೂ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿಯುವ ಮೂಲಕ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 212 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ನಿಯಂತ್ರಿಸಿದ್ದರೆ ಪಾಕಿಸ್ತಾನ್ ತಂಡಕ್ಕೆ ನೆಟ್ ರನ್ ರೇಟ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೇರುವ ಅವಕಾಶವಿತ್ತು. ಆದರೆ ಶ್ರೀಲಂಕಾ ಬರೋಬ್ಬರಿ 207 ರನ್​ಗಳಿಸಿ ಕೇವಲ 5 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಅತ್ತ ಈ ಪಂದ್ಯದಲ್ಲಿ ಗೆದ್ದರೂ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಪಂದ್ಯದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಟಾಸ್ ಸೋತಾಗಲೇ ಇಬ್ಬನಿಯ ಸವಾಲು ಎದುರಾಗಿತ್ತು. ದ್ವಿತೀಯ ಇನಿಂಗ್ಸ್​ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕಷ್ಟಕರ. ಹೀಗಾಗಿ ಶ್ರೀಲಂಕಾ ತಂಡವನ್ನು 148 ರನ್​ಗಳಿಗೆ ನಿರ್ಬಂಧಿಸುವುದು ಯಾವಾಗಲೂ ಸವಾಲೇ ಆಗಿರುತ್ತದೆ.

ಒಂದು ವೇಳೆ ನಾವು ಟಾಸ್ ಗೆದ್ದಿದ್ದರೆ, ಕಥೆನೇ ಬೇರೆದಾಗಿರುತ್ತಿತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿದ್ದರಿಂದ ಇಬ್ಬನಿಯ ಕಾರಣ ನಮ್ಮ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ  ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಇದಾಗ್ಯೂ ಸಾಹಿಬ್‌ಝಾದ ಫರ್ಹಾನ್ ಮಾತ್ರ ಅದ್ಭುತ ಪ್ರದರ್ಶನ ನೀಡಿದ್ದರು. ಅವರೊಂದಿಗೆ ಬೇರೊಬ್ಬ ಬ್ಯಾಟರ್​ ಉತ್ತಮ ಸಾಥ್ ನೀಡಿದ್ದಿದ್ದರೆ ಕೆಲ ಪಂದ್ಯಗಳು ನಮ್ಮ ಪರವಾಗುತ್ತಿತ್ತು. ಆದರೆ ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ತನ್ನೆಲ್ಲಾ ಪಂದ್ಯಗಳನ್ನಾಡುವ ಮೂಲಕ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿನಲ್ಲಿ ಕೇವಲ ಒಂದು ಮ್ಯಾಚ್ ಮಾತ್ರ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ವಿಶ್ವಕಪ್​ನಿಂದ ಹೊರಬಿದ್ದಿರುವ ಪಾಕ್ ಪಡೆ ಮಾರ್ಚ್ 2ನೇ ವಾರದಿಂದ ಬಾಂಗ್ಲಾದೇಶ್ ವಿರುದ್ಧ ಸರಣಿ ಆಡಲಿದೆ.

Source link

Leave a Reply

Your email address will not be published. Required fields are marked *