ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಮತ್ತು ಇರಾನ್ ದೇಶಗಳು ಮಾತ್ರವೇ ರಣರಂಗ ಸ್ಥಳವಾಗಿಲ್ಲ. ನೆರೆಯ ಕೊಲ್ಲಿ ದೇಶಗಳಿಗೂ (gulf countries) ದಾಳಿಗಳಾಗುತ್ತಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಾಡುತ್ತಿರುವ ದಾಳಿಗೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕದ ಸೇನಾ ನೆಲೆಗಳಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿ ಇರಾನ್ ದಾಳಿ ಮಾಡುತ್ತಿದೆ. ಇದರಿಂದ ಮಧ್ಯಪ್ರಾಚ್ಯ ಅಕ್ಷರಶಃ ರಣರಂಗವಾಗಿದೆ. ಇದು ಭಾರತದ ರಫ್ತು ಉದ್ಯಮಗಳಿಗೆ (India’s exports) ಕಳವಳ ತಂದಿರುವ ಸಂಗತಿ. ಅದರಲ್ಲೂ ಬಾಸ್ಮತಿ ಅಕ್ಕಿ ರಫ್ತುದಾರರು (Basmati rice exporters) ಚಿಂತಿತರಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಿಗೆ ತಡೆ ಇಲ್ಲವಾದರೂ, ಸರಬರಾಜು ಮಾಡಲು ಸಾಕಷ್ಟು ಅಪಾಯಗಳಿವೆ.
ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಭಾರತ ಅಗ್ರಮಾನ್ಯ ದೇಶ. ಜಾಗತಿಕವಾಗಿ ಶೇ. 70ರಷ್ಟು ಬಾಸ್ಮತಿ ಅಕ್ಕಿ ರಫ್ತು ಭಾರತದಿಂದ ನಡೆಯುತ್ತದೆ. 2024-25ರಲ್ಲಿ ಭಾರತ 60 ಲಕ್ಷ ಟನ್ಗಳಷ್ಟು ಬಾಸಮತಿ ಅಕ್ಕಿ ರಫ್ತು ಮಾಡಿತ್ತು. ಇದರ ಮೌಲ್ಯ 50,000 ಕೋಟಿ ರೂ. ಭಾರತದ ಈ ರಫ್ತಿನಲ್ಲಿ ಅತಿಹೆಚ್ಚು ಸರಬರಾಜಾಗುವುದು ಮಧ್ಯಪ್ರಾಚ್ಯ ದೇಶಗಳಿಗೆ. ಹೀಗಾಗಿ, ಭಾರತದ ಬಾಸ್ಮತಿ ಅಕ್ಕಿ ಬೆಳೆಗಾರರು ಮತ್ತು ವರ್ತಕರು, ಅದರಲ್ಲೂ ಪಂಜಾಬ್ ಮತ್ತು ಹರ್ಯಾಣ ಭಾಗದ ಜನರು ವ್ಯಾಕುಲಗೊಳ್ಳುವಂತಾಗಿದೆ.
ಸಾಗಣೆ ಮತ್ತು ಇನ್ಷೂರೆನ್ಸ್ ವೆಚ್ಚ ಹೆಚ್ಚುತ್ತದೆ…
ಮಧ್ಯಪ್ರಾಚ್ಯಗಳಿಗೆ ಭಾರತದಿಂದ ಸರಕುಗಳನ್ನು ಸಾಗಿಸಬೇಕಾದರೆ ರೆಡ್ ಸೀ ಮತ್ತು ಹಾರ್ಮುಜ್ ಸ್ಟ್ರೇಟ್ ಮೂಲಕವೇ ಹೋಗಬೇಕಾಗುತ್ತದೆ. ರೆಡ್ ಸೀ ಪ್ರದೇಶದಲ್ಲಿ ಹೌತಿ ಹೋರಾಟಗಾರರು ಹಡಗುಗಳ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು. ಹಾಗೆಯೇ, ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಗುರಿ ಮಾಡಿಬಿಟ್ಟರೆ ಮಧ್ಯಪ್ರಾಚ್ಯ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸುವುದು ದುಸ್ತರವಾಗುತ್ತದೆ.
ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?
ಈಗಿರುವ ಪರಿಸ್ಥಿತಿಯಲ್ಲಿ ಸರಕುಗಳನ್ನು ಹಡಗಿನ ಸಾಗಿಸಲು ವೆಚ್ಚ ಬಹಳ ಹೆಚ್ಚಾಗುತ್ತದೆ. ಇನ್ಷೂರೆನ್ಸ್ ವೆಚ್ಚವೂ ಅಧಿಕಗೊಳ್ಳುತ್ತದೆ. ಈಗಿರುವ ವ್ಯವಸ್ಥೆಯಲ್ಲಿ (ಸಿಐಎಫ್) ಮಾರಾಟಗಾರರು ಅಥವಾ ರಫ್ತುದಾರರೇ ಇನ್ಷೂರೆನ್ಸ್ ವೆಚ್ಚವನ್ನು ಭರಿಸಬೇಕು ಎಂದಿದೆ. ಹೀಗಾಗಿ, ಸಿಐಎಫ್ ಬದಲು ಎಫ್ಒಬಿ (ಫ್ರೀ ಆನ್ಬೋರ್ಡ್) ಗುತ್ತಿಗೆಗಳನ್ನು ಮಾಡಿಕೊಳ್ಳುವಂತೆ ಭಾರತದ ರಫ್ತುದಾರರಿಗೆ ಸಲಹೆ ನೀಡಲಾಗುತ್ತಿದೆ. ಅಂದರೆ, ಈ ಎಫ್ಒಬಿ ಕಾಂಟ್ರಾಕ್ಟ್ಗಳಲ್ಲಿ ಇನ್ಷೂರೆನ್ಸ್ ಇತ್ಯಾದಿ ಶಿಪ್ಪಿಂಗ್ ವೆಚ್ಚವನ್ನು ಆಮದುದಾರರೇ ಭರಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ