2026ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 253 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಯುವ ಬ್ಯಾಟರ್ ಜೆಕಬ್ ಬೆಥೆಲ್ ಶತಕ ಸಿಡಿಸಿದರಾದರೂ ಕೊನೆಯ ಓವರ್ಗಳಲ್ಲಿ ಭಾರತದ ಬೌಲರ್ಗಳ ಅತ್ಯುತ್ತಮ ಪ್ರದರ್ಶನ ತಂಡಕ್ಕೆ ರಣರೋಚಕ ಜಯ ತಂದುಕೊಟ್ಟಿತು.
2026 ರ ವಿಶ್ವ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯವು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ನ ಆರಂಭಿಕ ಆಟಗಾರ ಫಿನ್ ಅಲೆನ್ ಅಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಅವರಂತೆ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಪರ ಜಾಕೋಬ್ ಬೆಥೆಲ್ ಕೇವಲ 45 ಎಸೆತಗಳಲ್ಲಿ ಸ್ಮರಣೀಯ ಶತಕ ಬಾರಿಸಿದರು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಸ್ಯಾಮ್ಸನ್ ಅವರ 89 ರನ್ಗಳ ನೆರವಿನಿಂದ 253 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಪಂದ್ಯವೊಂದರಲ್ಲಿ ಅತ್ಯಧಿಕ ಸ್ಕೋರ್ ಎಂಬ ದಾಖಲೆಯನ್ನು ನಿರ್ಮಿಸಿತು.
ಆದಾಗ್ಯೂ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ ಆ ನಂತರ ಬಂದ ಜಾಕೋಬ್ ಬೆಥೆಲ್, ಟಿ20 ಕ್ರಿಕೆಟ್ನ ನಂಬರ್ 1 ಬೌಲರ್ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಗುರಿಯಾಗಿಸಿಕೊಂಡು ಬೌಂಡರಿಗಳ ಮಳೆ ಸುರಿಸಲಾರಂಭಿಸಿದರು. ಬೆಥೆಲ್, ವರುಣ್ ಬೌಲಿಂಗ್ನಲ್ಲಿ ಸತತ ಮೂರು ಸಿಕ್ಸರ್ಗಳನ್ನು ಸಿಡಿಸಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಜಂಟಿ-ವೇಗದ ಅರ್ಧಶತಕ ಎಂಬ ದಾಖಲೆಯನ್ನು ಬರೆಯಿತು.
ಆದರೆ ಅಲ್ಲಿಗೆ ನಿಲ್ಲದ ಬೆಥೆಲ್ ಭಾರತದ ಬೌಲರ್ಗಳನ್ನು ಪಂದ್ಯದುದ್ದಕ್ಕೂ ಕಾಡಿದರು. ಬೆಥೆಲ್ಗೆ ಸಾಥ್ ನೀಡಿದ ಜ್ಯಾಕ್ ಹಾಗೂ ಕರನ್ ಕೂಡ ಒಂದೊಳ್ಳೆ ಇನ್ನಿಂಗ್ಸ್ ಆಡಿದರು. ಇವರಿಬ್ಬರಿಂದ ಉತ್ತಮ ಬೆಂಬಲ ಪಡೆದ ಬೆಥೆಲ್ ಕೇವಲ 45 ಎಸೆತಗಳಲ್ಲಿ ತಮ್ಮ ಟಿ20 ವೃತ್ತಿಜೀವನದ ಚೊಚ್ಚಲ ಶತಕ ಬಾರಿಸಿದರು.
ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಶತಕ ಪೂರೈಸಿದ ಬೆಥೆಲ್, ಟಿ20 ವಿಶ್ವಕಪ್ನಲ್ಲಿ ಎರಡನೇ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ನ ಫಿನ್ ಅಲೆನ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು.





