
T20 World Cup 2026: “ಕ್ಲಚ್ ಅಂದ್ರೆ ಹಾರ್ದಿಕ್ ಪಾಂಡ್ಯ” (Clutch is Hardik Pandya) ಇದನ್ನು ಹೇಳಿದ್ದು ಮತ್ಯಾರೂ ಅಲ್ಲ ಹಾರ್ದಿಕ್ ಪಾಂಡ್ಯ. 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಸ್ವತಃ ತಮ್ಮನ್ನು ಕ್ಲಚ್ ಆಟಗಾರ ಎಂದು ಕರೆದಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 7 ರನ್ಗಳ ಜಯ ಸಾಧಿಸಿತ್ತು. ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ಕೂಡ ಇದೆ.
ಈ ಕೊಡುಗೆ ಕುರಿತಾಗಿ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮನ್ನು ತಾವೇ ಕ್ಲಚ್ ಆಟಗಾರ ಎಂದು ಕರೆದಿದ್ದಾರೆ.
ಈ ಮೂಲಕ ಒತ್ತಡದ ಸಮಯದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ನನಗಿದೆ ಎಂಬ ಆತ್ಮವಿಶ್ವಾಸವನ್ನು ಹಾರ್ದಿಕ್ ಪಾಂಡ್ಯ ವ್ಯಕ್ತಪಡಿಸಿದ್ದಾರೆ.
ಕ್ಲಚ್ ಆಟಗಾರ ಎಂದರೇನು?
ಪಂದ್ಯವು ಸೋಲಿನ ಹಂತದಲ್ಲಿದ್ದಾಗ ಅಥವಾ ಅಂತಿಮ ಓವರ್‌ಗಳಲ್ಲಿ ಗೆಲ್ಲಲು ಕಷ್ಟಸಾಧ್ಯವಾದ ರನ್ ಬೇಕಿದ್ದಾಗ, ಯಾವುದೇ ಆತಂಕವಿಲ್ಲದೆ ಶಾಂತವಾಗಿ ಆಡುವುದನ್ನು ‘ಕ್ಲಚ್ ಪರ್ಫಾರ್ಮೆನ್ಸ್’ ಎನ್ನಲಾಗುತ್ತದೆ.
ದೊಡ್ಡ ಪಂದ್ಯಗಳಲ್ಲಿ, ಅಂದರೆ ವಿಶ್ವಕಪ್ ಫೈನಲ್ ಅಥವಾ ಸೆಮಿಫೈನಲ್ ಅಥವಾ ಪಂದ್ಯದ ಅಂತಿಮ ಕ್ಷಣಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ‘ಕ್ಲಚ್ ಪ್ಲೇಯರ್’ ಎಂದು ಕರೆಯುತ್ತಾರೆ.
ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್ ಅಂತಹ ಆಟಗಾರರನ್ನು ಅವರ ಪಂದ್ಯ ಗೆಲ್ಲಿಸುವ ಸಾಮರ್ಥ್ಯಕ್ಕಾಗಿ ‘ಕ್ಲಚ್ ಪ್ಲೇಯರ್‌ಗಳು’ ಎಂದು ಗುರುತಿಸಲಾಗುತ್ತಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಕೂಡ ತಮ್ಮನ್ನು ತಾವೇ ಕ್ಲಚ್ ಆಟಗಾರ ಎಂದು ಬಣ್ಣಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಕ್ಲಚ್ ಆಟಗಾರನೇ?
ಹಾರ್ದಿಕ್ ಪಾಂಡ್ಯ ಕ್ಲಚ್ ಆಟಗಾರನೇ ಎಂದು ಕೇಳಿದರೆ ಖಂಡಿತವಾಗಿಯೂ ಹೌದು. ಏಕೆಂದರೆ 2024ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಟೀಮ್ ಇಂಡಿಯಾ ಪರ ಡೆತ್ ಓವರ್‌ಗಳಲ್ಲಿ ಬ್ಯಾಟ್ ಬೀಸುವ ಪಾಂಡ್ಯ ಇಡೀ ಪಂದ್ಯದ ಚಿತ್ರಣ ಬದಲಿಸುವ ಇನಿಂಗ್ಸ್ ಆಡುತ್ತಾ ಬಂದಿದ್ದಾರೆ.
ಇದರ ಜೊತೆಗೆ ಒತ್ತಡದ ಸನ್ನಿವೇಶಗಳಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಕೂಡ ಗಮನ ಸೆಳೆಯುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ ನಿರ್ಣಾಯಕ ಓವರ್ಗಳನ್ನು ಎಸೆಯುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 19ನೇ ಓವರ್ ಎಸೆದು ಕೇವಲ 9 ರನ್ ಮಾತ್ರ ಬಿಟ್ಟುಕೊಟ್ಟಿರುವುದು.
ಇದನ್ನೂ ಓದಿ: ಸದ್ದಡಗಿಸುವುದೇ ನಮ್ಮ ಗುರಿ: ಮಿಚೆಲ್ ಸ್ಯಾಂಟ್ನರ್
ಇನ್ನು 2024ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದ ಫೈನಲ್ ಓವರ್ ಎಸೆದಿರುವುದು ಕೂಡ ಹಾರ್ದಿಕ್ ಪಾಂಡ್ಯ. ಈ ವೇಳೆ ಕೇವಲ 8 ರನ್ ನೀಡಿ ಭಾರತ ತಂಡಕ್ಕೆ 7 ರನ್ಗಳ ಜಯ ತಂದುಕೊಟ್ಟಿದ್ದರು. ಅಂದರೆ ಒತ್ತಡದ ಸನ್ನಿವೇಶಗಳನ್ನು ಮೆಟ್ಟಿ ನಿಂತು ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಪಾಂಡ್ಯರನ್ನು ಕ್ಲಚ್ ಪ್ಲೇಯರ್ ಎಂದೇ ಹೇಳಬಹುದು.