ಐಪಿಎಎಲ್ 2026 ರ ವೇಳಾಪಟ್ಟಿಯನ್ನು ಬಿಸಿಸಿಐ ಕೊನೆಗೂ ಪ್ರಕಟಿಸಿದೆ. ಈ ಮೊದಲೇ ವರದಿಯಾದ್ದಂತೆ ಮೊದಲ 16 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಅದರಂತೆ ಮಾರ್ಚ್ 28 ರಿಂದ ಆರಂಭವಾಗಲಿರುವ 19ನೇ ಆವೃತ್ತಿಯ ಐಪಿಎಲ್ ಮೇ 31 ರವರೆಗೆ ನಡೆಯಲಿದೆ. ಆದಾಗ್ಯೂ ಈಗ ಬಿಡುಗಡೆಯಾಗಿರುವ ವೇಳಾಪಟ್ಟಿಯಲ್ಲಿ 20 ಪಂದ್ಯಗಳು ನಡೆಯಲಿವೆ.
ಬಿಸಿಸಿಐ ಈ ರೀತಿಯಾಗಿ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಕಾರಣವೂ ಇದೆ. ಅದೆನೆಂದರೆ ಮುಂಬರುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ. ಈ ಮೂರು ರಾಜ್ಯಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಹೀಗಾಗಿ ಚುನಾವಣೆ ಹಾಗೂ ಐಪಿಎಲ್ ಪಂದ್ಯಗಳಿಗೆ ಒಟ್ಟಿಗೆ ಭದ್ರತೆ ಒದಗಿಸಲು ಕಷ್ಟಕರವಾಗಿರುವುದರಿಂದ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.
ವಾಸ್ತವವಾಗಿ ಈ ವರ್ಷ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಚುನಾವಣೆಗಳು ನಡೆಯಲಿದ್ದು, ಈ ಮೂರೂ ರಾಜ್ಯಗಳು ಐಪಿಎಲ್ ಪಂದ್ಯಗಳನ್ನು ಆಯೋಜಿಸಲಿವೆ. ಹೀಗಾಗಿ ಈ ಮೂರು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಬಿಸಿಸಿಐ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಜೀವ್ ಶುಕ್ಲಾ, ‘2026 ರ ಐಪಿಎಲ್ ನಿಗದಿಯಂತೆ ನಡೆಯಲಿದೆ. ನಾವು ಈಗ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಚುನಾವಣಾ ಆಯೋಗವು ಚುನಾವಣೆ ನಡೆಯಲಿರುವ ರಾಜ್ಯಗಳ ದಿನಾಂಕಗಳನ್ನು ಬಿಡುಗಡೆ ಮಾಡಿದ ನಂತರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದಿದ್ದಾರೆ.
ಪ್ರಸ್ತುತ ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯು ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ . ನಂತರ ಪಂದ್ಯಗಳು ಏಪ್ರಿಲ್ 12 ರವರೆಗೆ ಮುಂದುವರಿಯಲಿದ್ದು, ಪ್ರತಿ ತಂಡವು ಸರಿಸುಮಾರು ಮೂರು ಅಥವಾ ನಾಲ್ಕು ಪಂದ್ಯಗಳನ್ನು ಆಡಲಿವೆ.
ಈ ವೇಳಾಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ನಾಲ್ಕು ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯ ತವರು ಅಂಗಳವಾದ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇನ್ನೆರೆಡು ಪಂದ್ಯಗಳು ಗುವಾಹಟ್ಟಿ ಹಾಗೂ ಮುಂಬೈನಲ್ಲಿ ನಡೆಯಲಿವೆ. ಈ ನಾಲ್ಕು ಪಂದ್ಯಗಳು ಸಂಜೆ 7:30 ಕ್ಕೆ ಆರಂಭವಾಗಲಿವೆ.





