ಬೆಂಗಳೂರು, ಆಗಸ್ಟ್ 02: ವಿಶಾಲ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಬಂದಾಯ್ತು. ಜಿಬಿಎ ಅಡಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದಾವೆ. ಆದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪರಿಣಾಮ ಪಾಲಿಕೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
5 ನಗರ ಪಾಲಿಕೆಗಳು ಏಕೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದು ವರ್ಷವೇ ಆಗುತ್ತಿದೆ. ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪರಿಣಾಮ ಬೆಂಗಳೂರಿನಲ್ಲಿರುವ 1.03 ಕೋಟಿ ಮತದಾರರ ಪೈಕಿ ಅಂದಾಜು 50 ಲಕ್ಷ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಉಳಿದ ಜನಸಂಖ್ಯೆಗೆ 5 ನಗರ ಪಾಲಿಕೆಗಳು ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಅಸ್ತಿತ್ವದಲ್ಲಿರುವ 5 ನಗರ ಪಾಲಿಕೆಗಳ ಪೈಕಿ ಕೆಲವು ಪಾಲಿಕೆಗಳ ನಿರ್ವಹಣೆಯೇ ಸವಾಲಾಗಿದೆ. ಅಧಿಕಾರಿ, ನೌಕರರ ಸಂಬಳ, ಆಡಳಿತಾತ್ಮಕ ವೆಚ್ಚ ಸರಿದೂಗಿಸುವುದೂ ಪಾಲಿಕೆಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ 5 ನಗರ ಪಾಲಿಕೆಗಳ ಬದಲು ಎರಡು ಪಾಲಿಕೆಗಳನ್ನಷ್ಟೇ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ಸ್ವಪಕ್ಷೀಯ ಹಾಗೂ ವಿಪಕ್ಷಗಳಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: ಜಿಬಿಎ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ನಗರದಲ್ಲಿ ಇನ್ನೂ ರಾರಾಜಿಸುತ್ತಿವೆ ಹಳೆಯ ಬಿಬಿಎಂಪಿ ನಾಮಫಲಕಳು!
ಒಟ್ಟಾರೆ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪರ ವಿರೋಧಗಳು ಜೋರಾಗಿತ್ತು. ಇದೀಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪರಿಣಾಮ ಪಾಲಿಕೆಗಳ ವಿಲೀನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆರ್ಥಿಕ ವೆಚ್ಚ ಸರಿದೂಗಿಸಲು ಸರ್ಕಾರ ಏನು ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.