
ಮಂಗಳೂರು, ಮಾರ್ಚ್ 13: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಇದೀಗ ಭಾರತದ ಡ್ರೈಫ್ರೂಟ್ಸ್ (Dry Fruits) ಉದ್ಯಮಕ್ಕೂ ತಟ್ಟಿದ್ದು, ವಿಶೇಷವಾಗಿ ಮಂಗಳೂರಿನ (Mangalore) ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಖರ್ಜೂರ ಸೇರಿದಂತೆ ಹಲವು ಒಣಹಣ್ಣುಗಳ ಪೂರೈಕೆ ಅಡಚಣೆಗೆ ಒಳಗಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಶುರುವಾಗಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ಡ್ರೈಫ್ರೂಟ್ಸ್ ಆಮದು ಸಂಸ್ಥೆಯಾದ ‘ರೀಮ್ ಟ್ರೇಡರ್ಸ್’ ಸೇರಿದಂತೆ ಹಲವು ವ್ಯಾಪಾರಿಗಳು ಈಗ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಕಂಪನಿ ಮಂಗಳೂರಿನಿಂದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಡ್ರೈಫ್ರೂಟ್ಸ್ ಪೂರೈಸುತ್ತದೆ. ಕರ್ನಾಟಕದ ವಿವಿಧ ಕಡೆಗಳಿಗೂ ಇಲ್ಲಿಂದಲೇ ಡ್ರೈಫ್ರೂಟ್ಸ್ ಪೂರೈಕೆಯಾಗುತ್ತಿದೆ.
ಆಮದು ಸ್ಥಗಿತ, ಡ್ರೈಫ್ರೂಟ್ಸ್ ದರ ಶೇ 15 ರಿಂದ 20 ರವರೆಗೆ ಏರಿಕೆ
ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್ ಆಮದು ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಖರ್ಜೂರ ಸೇರಿದಂತೆ ಅಂಜೀರ್, ಅಪ್ರಿಕಾಟ್, ಬಾದಾಮ್, ಕಪ್ಪು ದ್ರಾಕ್ಷಿ, ಫೈನ್ ನಟ್ಸ್ ಸೇರಿದಂತೆ ಹಲವು ಒಣಹಣ್ಣುಗಳ ಬೆಲೆಗಳು ಶೇ 15 ರಿಂದ 20 ರವರೆಗೆ ಏರಿಕೆ ಕಂಡಿವೆ.
ಸಾಮಾನ್ಯವಾಗಿ ಭಾರತಕ್ಕೆ ಆಮದು ಆಗುವ ಖರ್ಜೂರಗಳಲ್ಲಿ ಸುಮಾರು 60 ಶೇಕಡಾ ಪ್ರಮಾಣ ಇರಾನ್ನಿಂದಲೇ ಬರುತ್ತದೆ. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್ನಿಂದ ಬರುತ್ತಿದ್ದ ದೊಡ್ಡ ಪ್ರಮಾಣದ ಖರ್ಜೂರ ಪೂರೈಕೆ ಅಡಚಣೆಗೆ ಒಳಗಾಗಿದೆ.
ಅಫ್ಘಾನಿಸ್ತಾನದಿಂದಲೂ ಆಮದು ಸ್ಥಗಿತ!
ಇದಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್ಗಳನ್ನು ಪಾಕಿಸ್ತಾನದ ವಾಘಾ ಗಡಿ ಮಾರ್ಗದ ಮೂಲಕ ರಸ್ತೆ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪಾಕಿಸ್ತಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಆ ಮಾರ್ಗದಲ್ಲಿಯೂ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನದಿಂದ ಬರಬೇಕಾದ ಸರಕುಗಳನ್ನು ಈಗ ಸಮುದ್ರ ಮಾರ್ಗದ ಮೂಲಕ ಇರಾನ್ನ ಬಂದರ್ ಅಬ್ಬಾಸ್ ಬಂದರು ತಲುಪಿ, ಅಲ್ಲಿಂದ ಭಾರತಕ್ಕೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಗಾಟ ಸಮಯವೂ ಹೆಚ್ಚಾಗಿ, ವೆಚ್ಚವೂ ಹೆಚ್ಚಾಗಿದೆ.
ರಂಜಾನ್ ಸೀಸನ್ಗೆ ವ್ಯಾಪಾರಿಗಳಿಗೆ ಆತಂಕ
ರಂಜಾನ್ ಸೀಸನ್ ಹಿನ್ನೆಲೆಯಲ್ಲಿ ಖರ್ಜೂರಕ್ಕೆ ಹೆಚ್ಚಾದ ಬೇಡಿಕೆ ಇರುತ್ತದೆ. ಆದರೆ ಈ ವೇಳೆಯಲ್ಲೇ ಪೂರೈಕೆ ಕಡಿಮೆಯಾಗಿರುವುದು ವ್ಯಾಪಾರಿಗಳಿಗೆ ತಲೆನೋವಾಗುತ್ತಿದೆ. ಈಗಾಗಲೇ ಬಂದಿದ್ದ ಕೆಲವು ಸ್ಟಾಕ್ಗಳು ಮಾರಾಟವಾಗಿದ್ದು, ಹೊಸ ಸರಕುಗಳ ಆಗಮನದಲ್ಲಿ ವಿಳಂಬವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಡ್ರೈಫ್ರೂಟ್ಸ್ ಪೂರೈಕೆ ಸ್ಥಗಿತ: ಉದ್ಯಮಿ ಹೇಳಿದ್ದೇನು?
ಮಂಗಳೂರಿನ ರೀಮ್ ಟ್ರೇಡರ್ಸ್ ಸಂಸ್ಥೆಯ ಮಾಲೀಕ ಮೊಹಮ್ಮದ್ ಮುಖ್ತಾರ್ ಅವರ ಪ್ರಕಾರ, ಯುದ್ಧದ ಪರಿಣಾಮದಿಂದ ಡ್ರೈಫ್ರೂಟ್ಸ್ ಕೊರತೆ ಉಂಟಾಗಿದ್ದು, ದರಗಳಲ್ಲೂ ಹೆಚ್ಚಳವಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದಲೂ ಖರ್ಜೂರ ಪೂರೈಕೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ, ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಡ್ರೈ ಫ್ರೂಟ್ಸ್
ಒಟ್ಟಿನಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಭಾರತದ ಡ್ರೈಫ್ರೂಟ್ಸ್ ಉದ್ಯಮದ ಮೇಲೂ ಪರಿಣಾಮ ಬೀರಿದ್ದು, ಮಂಗಳೂರಿನ ವ್ಯಾಪಾರಿಗಳು ಹಾಗೂ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಅದರ ಪರಿಣಾಮ ಕಾಣಿಸುತ್ತಿದೆ.