
ರಾಯಚೂರು, ಮಾರ್ಚ್ 17: ಎಲ್ಪಿಜಿ ಸಿಲಿಂಡರ್ ಕೊರತೆ ರಾಜ್ಯಾದ್ಯಂತ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ, ರಾಯಚೂರಿನ ಕಾನ್ಸ್ಟೇಬಲ್ ವಿನೋದ್ ಬಯೋಗ್ಯಾಸ್ ಪದ್ಧತಿ ಅಳವಡಿಸಿ ಗಮನ ಸೆಳೆದಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನೇಕ ಕಡೆಗಳಲ್ಲಿ ಜನ ಕಿಲೋಮೀಟರ್ಗಟ್ಟಲೆ ಸರತಿಯಲ್ಲಿ ನಿಂತು ಪರದಾಡುತ್ತಿರುವಂಥ ಸ್ಥಿತಿ ಇದೆ. ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ಮನೆಯ ದೈನಂದಿನ ಅಡುಗೆಗೆ ಬಯೋಗ್ಯಾಸ್ ಬಳಸುತ್ತಿದ್ದು, ಇದು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಈಗ ಗಮನ ಸೆಳೆದಿದೆ.
ಕೇವಲ 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಇದು ಗೃಹ ತ್ಯಾಜ್ಯ, ಹಣ್ಣು, ತರಕಾರಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುತ್ತದೆ. ಇದು ಎಲ್ಪಿಜಿ ಸಿಲಿಂಡರ್ನಂತೆಯೇ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ವಿನೋದ್ ಅವರ ಈ ಮಾದರಿ ಪದ್ಧತಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25-30 ವರ್ಷಗಳ ಬಾಳಿಕೆ ಬರಲಿದ್ದು, ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉತ್ತಮ ಪರ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.