
ಬೆಂಗಳೂರು, ಮಾರ್ಚ್ 18: ಇರಾನ್–ಇಸ್ರೇಲ್ ಯುದ್ಧದ (Iran-Israel War) ಪರಿಣಾಮವಾಗಿ ಉಂಟಾದ ಅಡುಗೆ ಅನಿಲ (ಕಮರ್ಷಿಯಲ್ LPG) ಕೊರತೆ ಕರ್ನಾಟಕದಲ್ಲಿ (Karnataka) ತೀವ್ರ ಸಮಸ್ಯೆ ಸೃಷ್ಟಿಸಿದೆ. ಕಳೆದ 9 ದಿನಗಳಿಂದ ಮುಂದುವರಿದಿರುವ ಈ ಸಂಕಷ್ಟದಿಂದ ದೊಡ್ಡ ದೊಡ್ಡ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಹೋಟೆಲ್ ಆಹಾರಕ್ಕೆ ಅವಲಂಬಿತವಾಗಿದ್ದ ಜನರು ಈಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. 6 ಸಾವಿರ ರೂಪಾಯಿ ಕೊಟ್ಟರೂ ಕಮರ್ಷಿಯಲ್ ಸಿಲಿಂಡರ್ ಒಂದು ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ.
ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಹೋಟೆಲ್ಗಳಿಗೂ ಗ್ಯಾಸ್ ಕೊರತೆಯ ಹೊಡೆತ ಬಿದ್ದಿದ್ದು, ವಿ.ವಿ.ಪುರಂನ ಖ್ಯಾತ ‘ನ್ಯೂ ಮಾಡರ್ನ್ ಹೋಟೆಲ್’ ಬಾಗಿಲು ಮುಚ್ಚಿದೆ. ಇನ್ನೊಂದೆಡೆ, ‘ನಾಗಾರ್ಜುನ ಹೋಟೆಲ್’ ಮೆನು ಕಡಿತಗೊಳಿಸಿ ಗ್ರಾಹಕರ ಸಹಕಾರ ಕೋರಿದೆ.
ಜಿಲ್ಲೆಗಳಲ್ಲೂ ಸಮಸ್ಯೆ: ಇಂದಿರಾ ಕ್ಯಾಂಟೀನ್ಗೂ ತಟ್ಟಿದ ಗ್ಯಾಸ್ ಬಿಸಿ
ಧಾರವಾಡದಲ್ಲಿ ಗ್ಯಾಸ್ ಲಭ್ಯವಿಲ್ಲದ ಕಾರಣ ನಗರದ ಹಳೆಯ ಹೋಟೆಲ್ ‘ವಿಜಯಸಾಗರ್’ ಕೂಡ ಬಂದ್ ಆಗಿದ್ದು, ಸುಮಾರು 20 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದಾರೆ. ತುಮಕೂರಿನಲ್ಲಿ ಹೋಟೆಲ್ಗಳ ಜೊತೆಗೆ ಇಂದಿರಾ ಕ್ಯಾಂಟೀನ್ಗಳೂ ಕಾರ್ಯನಿರ್ವಹಣೆ ನಿಲ್ಲಿಸಿದ್ದರಿಂದ ಅನೇಕರು ಬೇರೆ ಉದ್ಯೋಗಗಳತ್ತ ಮುಖಮಾಡಿದ್ದಾರೆ. ರಂಜಾನ್ ಹಿನ್ನೆಲೆ ಆಹಾರ ತಯಾರಿಕೆಗೆ ಗ್ಯಾಸ್ ಸಿಗದ ಕಾರಣ, ಸೌದೆ ಒಲೆಗಳತ್ತ ಮೊರೆ ಹೋಗಲಾಗಿದೆ.
ವಿಜಯಪುರದಲ್ಲೂ ರೊಟ್ಟಿ ತಯಾರಿಕೆಗೆ ಗ್ಯಾಸ್ ಕೊರತೆ ತಟ್ಟಿದ್ದು, ಅನಿವಾರ್ಯವಾಗಿ ಸೌದೆ ಮತ್ತು ಇದ್ದಿಲು ಒಲೆಗಳನ್ನು ಬಳಸಲಾಗುತ್ತಿದೆ.
ರಫ್ತು ಸ್ಥಗಿತ: ಲಕ್ಷಾಂತರ ರೂ. ಮೌಲ್ಯದ ಆಹಾರೋತ್ಪನ್ನ ಹಾಸನಕ್ಕೆ ವಾಪಸ್
ಹಾಸನದಲ್ಲಿ ಗರ್ಕಿನ್, ಬೇಬಿಕಾರ್ನ್, ಮಿಡಿ ಸೌತೆ ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಹಾರ್ಮುಜ್ ಜಲಮಾರ್ಗದ ಅಡಚಣೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಕಂಟೇನರ್ಗಳಲ್ಲೇ ವಾಪಸ್ ಆಗುತ್ತಿರುವುದು ಉದ್ಯಮಿಗಳಿಗೆ ಭಾರೀ ನಷ್ಟ ಉಂಟುಮಾಡಿದೆ.
ತತ್ತರಿಸಿದ ಕುಕ್ಕುಟೋದ್ಯಮ: ಮೊಟ್ಟೆ ಬೆಲೆ ದಿಢೀರ್ ಕುಸಿತ
ಕುಕ್ಕುಟೋದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಬೆಂಗಳೂರಿನಲ್ಲಿ ಪ್ರತಿದಿನ 1.25 ಕೋಟಿ ಮೊಟ್ಟೆಗಳಿಗೆ ಇದ್ದ ಬೇಡಿಕೆ, ಹೋಟೆಲ್ಗಳು ಬಂದ್ ಆಗಿದ್ದರಿಂದ 80 ಲಕ್ಷಕ್ಕೆ ಇಳಿದಿದೆ. ಗಲ್ಫ್ ರಾಷ್ಟ್ರಗಳಿಗೆ ರಫ್ತು ಕಡಿಮೆಯಾಗಿರುವುದರಿಂದ ಮೊಟ್ಟೆ ದರ 6 ರೂಪಾಯಿಯಿಂದ 4 ರೂಪಾಯಿಗೆ ಕುಸಿದಿದೆ.
ಇದನ್ನೂ ಓದಿ: ಗ್ಯಾಸ್ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಸಿಲಿಂಡರ್ ಸೀಜ್
ಒಟ್ಟಾರೆ, ಮಧ್ಯಪ್ರಾಚ್ಯ ಪ್ರದೇಶದ ಯುದ್ಧದ ಪರಿಣಾಮ ಕೇವಲ LPG ಸಿಲಿಂಡರ್ ಕೊರತೆಗಷ್ಟೇ ಸೀಮಿತವಾಗದೆ ಹೋಟೆಲ್ ಉದ್ಯಮ, ರಫ್ತು ವಲಯ ಮತ್ತು ಪೌಲ್ಟ್ರಿ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಿದೆ. ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.