ಹರಿಹರ ಪಂಚಮಸಾಲಿ ಮಠದಲ್ಲಿ ‘ಲೆಕ್ಕ ಕೊಡಿ’ ಅಭಿಯಾನ: ಕೋಟಿಗಟ್ಟಲೆ ಅವ್ಯವಹಾರದ ಶಂಕೆ

ಹರಿಹರ ಪಂಚಮಸಾಲಿ ಮಠದಲ್ಲಿ ‘ಲೆಕ್ಕ ಕೊಡಿ’ ಅಭಿಯಾನ: ಕೋಟಿಗಟ್ಟಲೆ ಅವ್ಯವಹಾರದ ಶಂಕೆ

ದಾವಣಗೆರೆ, ಮಾ,24: ಹರಿಹರದ ಹನಗವಾಡಿ ಸಮೀಪವಿರುವ ಪಂಚಮಸಾಲಿ ಗುರುಪೀಠದಲ್ಲಿ ಆಡಳಿತ ಮಂಡಳಿ ಮತ್ತು ಭಕ್ತರ ನಡುವಿನ ಸಂಘರ್ಷ ತಾರಕಕ್ಕೇರಿದೆ. 2008ರಿಂದ ಮಠದಲ್ಲಿ ನಡೆದಿರುವ ಪ್ರತಿಯೊಂದು ಪೈಸೆಗೂ ಲೆಕ್ಕ ನೀಡುವಂತೆ ಆಗ್ರಹಿಸಿ ಭಕ್ತರು ‘ಲೆಕ್ಕ ಕೊಡಿ’ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.ಮಾರ್ಚ್ 10ರಂದು ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಲೆಕ್ಕ ಕೇಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಗದ್ದಲ ಉಂಟಾಗಿದೆ. ಈ ವೇಳೆ ಮಠದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಡಿವಿಆರ್ (DVR) ಅನ್ನು ಕಿತ್ತುಕೊಂಡು ಹೋಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಹಾಗೂ ಧರ್ಮದರ್ಶಿ ಮಂಡಳಿಯ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಕಾರ್ಯದರ್ಶಿ ಜ್ಯೋತಿ ಪ್ರಕಾಶ, ಧರ್ಮದರ್ಶಿ ಚಂದ್ರಶೇಖರ ಪೂಜಾರ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಸುಡು ಬಿಸಿಲನ್ನೂ ಲೆಕ್ಕಿಸದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಭಕ್ತರು ಮಠದ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಿಗದಿಯಾಗಿದ್ದ ಸಭೆಗೆ ಟ್ರಸ್ಟಿಗಳು ಬಾರದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವ್ಯವಹಾರದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರ ಪಾತ್ರವಿಲ್ಲ. ಸ್ವಾಮೀಜಿಗಳೇ ಸ್ವತಃ ಲೆಕ್ಕ ಕೇಳುತ್ತಿರುವುದರಿಂದ ಟ್ರಸ್ಟಿಗಳಿಗೆ ಅವರು ಬೇಡವಾಗಿದ್ದಾರೆ ಎಂದು ಪ್ರತಿಭಟನಾ ನಿರತ ಮುಖಂಡರು ಆರೋಪಿಸಿದ್ದಾರೆ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಣೆಬೆನ್ನೂರು ಮಾಜಿ ಶಾಸಕ ಅರುಣ ಕುಮಾರ ಪೂಜಾರಿ, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಹರಿಹರದ ಮುಖಂಡ ಪರಮೇಶ್ವರ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *