
ಬೆಂಗಳೂರು, ಮಾರ್ಚ್ 28: ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದು ಭಾವಿಸಿರುವ ಪೋಷಕರಿಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲಾ ವಾಹನಗಳ ಚಾಲಕರೇ ಕುಡಿದು ಬಸ್ ಚಲಾಯಿಸುತ್ತಾ (Drunk and Drive) ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ (ಮಾರ್ಚ್ 27) ಬೆಳ್ಳಂಬೆಳಗ್ಗೆ ಬೆಂಗಳೂರು ಸಂಚಾರ ಪೊಲೀಸರು (Bangalore Traffic Police) ನಡೆಸಿದ ವಿಶೇಷ ಡ್ರಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆಯಲ್ಲಿ ಭರ್ಜರಿ ಬೇಟೆ ನಡೆದಿದೆ.
ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್: ಪೊಲೀಸರಿಗೇ ಶಾಕ್!
ನಗರದಾದ್ಯಂತ ಸಂಚಾರ ವಿಭಾಗದ ಪೊಲೀಸರು ನಡೆಸಿದ ‘ಸ್ಪೆಷಲ್ ಡ್ರೈವ್’ನಲ್ಲಿ ಶಾಲಾ ಬಸ್ ಹಾಗೂ ನೀರಿನ ಟ್ಯಾಂಕರ್ ಚಾಲಕರನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಖಾಸಗಿ ಶಾಲಾ ಬಸ್ ಚಾಲಕರ ಹೊಣೆಗೇಡಿತನ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆಯ ಅಂಕಿಅಂಶ
- ಪಾನಮತ್ತ ಶಾಲಾ ಬಸ್ ಚಾಲಕರು: 59
- ಪಾನಮತ್ತ ನೀರಿನ ಟ್ಯಾಂಕರ್ ಚಾಲಕರು: 14
ಲೈಸೆನ್ಸ್ ರದ್ದು ಮಾಡಲು ಕ್ರಮ
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಒಟ್ಟು 73 ಚಾಲಕರ ವಿರುದ್ಧ ಐಎಂವಿ (IMV) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಚಾಲಕರುಗಳ ಚಾಲನಾ ಪರವಾನಗಿಯನ್ನು (DL) ಅಮಾನತುಗೊಳಿಸಲು ಆರ್‌ಟಿಒ (RTO) ಕಚೇರಿಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತೀಕ್ ರೆಡ್ಡಿ ತಿಳಿಸಿದ್ದಾರೆ.
ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಆಕ್ರೋಶ
ಹತ್ತಾರು ಸಾವಿರ ರೂಪಾಯಿ ಫೀಸು ಪಡೆಯುವ ಖಾಸಗಿ ಶಾಲೆಗಳು ಚಾಲಕರ ನೇಮಕಾತಿ ವೇಳೆ ಕನಿಷ್ಠ ಜವಾಬ್ದಾರಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಧನದಾಹಿ ಶಾಲೆಗಳು ಇಂತಹ ಕುಡುಕ ಚಾಲಕರಿಗೆ ಬ್ರೇಕ್ ಹಾಕದಿದ್ದರೆ ಮಕ್ಕಳ ಅಮೂಲ್ಯ ಜೀವಕ್ಕೆ ಅಪಾಯ ಕಟ್ಟಿಬುತ್ತಿ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.