
ಬೆಂಗಳೂರು. ಮಾ.30: ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಸುಡು ಬಿಸಿಲಿನ ನಡುವೆಯೇ ವರುಣನ ಸಿಂಚನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನದಲ್ಲಿ 2-3°C ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ. ಬೆಂಗಳೂರಿನ ಮುಂದಿನ 7 ದಿನ ಬೇಸಿಗೆಯ ತಾಪ ಏರುತ್ತಿದ್ದು, ಬಿಸಿಲಿನ ಬೇಗೆಯ ನಡುವೆಯೇ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಮಧ್ಯಾಹ್ನದ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಹವಾಮಾನದ ಸ್ಥಿತಿ ತೇವಾಂಶಭರಿತ ಉಷ್ಣಾಂಶ ಹಾಗೂ ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಹುಬ್ಬಳ್ಳಿ ಒಣ ಹವೆ ಇರಲಿದ್ದು, ಬಿಸಿಲು ತೀವ್ರವಾಗಲಿದ್ದು, ಮಧ್ಯಾಹ್ನದ ವೇಳೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಏಪ್ರಿಲ್ 2ರ ನಂತರ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ.
| ವಲಯ | ನಿರೀಕ್ಷಿತ ಹವಾಮಾನ | ಜಿಲ್ಲೆಗಳು |
| ದಕ್ಷಿಣ ಒಳನಾಡು | ಹಗುರ ಮಳೆ / ಗುಡುಗು | ಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಹಾಸನ |
| ಉತ್ತರ ಒಳನಾಡು | ಅತಿಯಾದ ಬಿಸಿಲು / ಒಣ ಹವೆ | ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು |
| ಕರಾವಳಿ | ಉಷ್ಣಾಂಶ ಮತ್ತು ತೇವಾಂಶ ಹೆಚ್ಚಳ | ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ |
| ಮಲೆನಾಡು | ಸಾಧಾರಣ ಮಳೆ ಸಾಧ್ಯತೆ | ಶಿವಮೊಗ್ಗ, ಚಿಕ್ಕಮಗಳೂರು |
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
ಮುಂದಿನ 7 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಹಾಗೂ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆಯಾಗುವ pic.twitter.com/TDubo4KHCN
— Karnataka State Natural Disaster Monitoring Centre (@KarnatakaSNDMC) March 30, 2026
ಬೆಳಗಾವಿಯಲ್ಲಿ ಭಾಗಶಃ ಮೋಡ ಹಾಗೂ ಒಣ ಹವೆ ಇರಲಿದೆ. ಬೆಳಗಾವಿಯ ಕೆಲವು ಭಾಗಗಳಲ್ಲಿ ಏಪ್ರಿಲ್ 4ರ ಸುಮಾರಿಗೆ ಸಿಡಿಲು ಸಹಿತ ಮಳೆಯಾಗಬಹುದು. ಹಾಸನದಲ್ಲಿ ಹಗುರ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕಲಬುರಗಿ ತೀವ್ರ ಬಿಸಿಲು ಹಾಗೂ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ದಾಟುವ ಸಾಧ್ಯತೆವಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಭಾಗದಲ್ಲಿ ಗುಡುಗು ಕೇಳಿಸಿದಾಗ ವಿದ್ಯುತ್ ಉಪಕರಣಗಳಿಂದ ದೂರವಿರಿ ಮತ್ತು ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ.
ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!
ಕಲಬುರಗಿ ಮತ್ತು ಹುಬ್ಬಳ್ಳಿ ಭಾಗದ ಜನರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಜಾಗ್ರತೆ ವಹಿಸಿ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ರೈತರು ಕಟಾವು ಮಾಡಿದ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ