ರಾಜ್ಯದಲ್ಲಿ ಆಟೋ ಎಲ್​ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯ್ಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ

ರಾಜ್ಯದಲ್ಲಿ ಆಟೋ ಎಲ್​ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯ್ಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ

ಬೆಂಗಳೂರು, ಏಪ್ರಿಲ್ 06: ಕರ್ನಾಟಕದಲ್ಲಿ ಆಟೋ ಎಲ್​ಪಿಜಿ (LPG) ಕೊರತೆ ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿದ್ದು, ಇದರ ಪರಿಣಾಮವಾಗಿ ಆಟೋ ಚಾಲಕರ ಜೀವನಸಂಕಷ್ಟಕ್ಕೆ ಸಿಲುಕಿದೆ. ಇಂಡಿಯನ್ ಆಯ್ಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ಸಂಸ್ಥೆ ಕರ್ನಾಟಕದಾದ್ಯಂತ ಆಟೋ ಎಲ್​ಪಿಜಿ ಪೂರೈಕೆಯನ್ನು ಹೆಚ್ಚಿಸಿರುವುದಾಗಿ ಭಾನುವಾರ ತಿಳಿಸಿದೆ.

ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಸಲಹೆ

ರಾಜ್ಯದಲ್ಲಿ ಒಟ್ಟು 72 ಆಟೋ ಎಲ್​ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 55 ಅನ್ನು ಐಒಸಿಎಲ್ ನಿರ್ವಹಿಸುತ್ತದೆ. 300ಕ್ಕೂ ಹೆಚ್ಚು ಖಾಸಗಿ ಡಿಸ್ಪೆನ್ಸಿಂಗ್ ಕೇಂದ್ರಗಳಿದ್ದರೂ, ಸುಮಾರು 80 ಪ್ರತಿಶತ ಸ್ಥಗಿತಗೊಂಡಿರುವುದರಿಂದ ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಮೂಲಸೌಕರ್ಯ ಕೊರತೆ ಮತ್ತು ಪೂರೈಕೆ ಸಾಮರ್ಥ್ಯದ ಅಭಾವದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಬೆಂಗಳೂರಿನಲ್ಲಿ ಸರ್ಕಾರಿ ಪಂಪ್‌ಗಳಲ್ಲಿ ಲೀಟರ್‌ಗೆ 89.52 ರೂ. ದರದಲ್ಲಿ LPG ಲಭ್ಯವಿದ್ದರೆ, ಖಾಸಗಿ ಪಂಪ್‌ಗಳಲ್ಲಿ ಬೆಲೆ 99ರಿಂದ 105 ರೂಪಾಯಿವರೆಗೆ ಇರುವುದರಿಂದ ಜನರು ಹೆಚ್ಚಾಗಿ ಸರ್ಕಾರಿ ಪಂಪ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಪಂಪ್​ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿನ ಸುಮಾರು 70 ಪ್ರತಿಶತ ಆಟೋಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಐಒಸಿಎಲ್ ಸಲಹೆ ನೀಡಿದೆ.

ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಇದರ ನಡುವೆ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ಹಲವು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ. ಸಂಘಟನೆಯ ಅಧ್ಯಕ್ಷ ಎಂ. ಮಂಜುನಾಥ್ ಹೇಳುವಂತೆ, ಆದಾಯ ಕುಸಿತ ಮತ್ತು ಇಂಧನ ಕೊರತೆಯಿಂದ ಚಾಲಕರು ಇಎಮ್ಐ, ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?

ಪ್ರತಿ ಆಟೋಗೆ ದಿನಕ್ಕೆ ಕನಿಷ್ಠ 6 ಲೀಟರ್ ಎಲ್​ಪಿಜಿ ಪೂರೈಕೆ ಖಚಿತಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ದಿನನಿತ್ಯ ಸುಮಾರು 300 ಟನ್ ಎಲ್​ಪಿಜಿ ಅವಶ್ಯಕವಿದ್ದು, ಈ ಸಮಸ್ಯೆ ತಕ್ಷಣ ಪರಿಹಾರವಾಗಬೇಕೆಂದು ಒತ್ತಾಯಿಸಲಾಗಿದೆ. ಜೊತೆಗೆ, ಸಿಎನ್​ಜಿ ಪರಿವರ್ತನೆಗೆ ಸರ್ಕಾರ ನೆರವು ನೀಡಬೇಕೆಂದು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *