ಕದನ ವಿರಾಮ ಘೋಷಿಸಿ ಅಮೆರಿಕ, ಇರಾನ್ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ

ಕದನ ವಿರಾಮ ಘೋಷಿಸಿ ಅಮೆರಿಕ, ಇರಾನ್ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ

ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಣಭೀಕರ ದಾಳಿಯ ಡೆಡ್​​ಲೈನ್ ಮುಗಿದಿದೆ. ಅಷ್ಟರಲ್ಲಿ ಅಮೆರಿಕ, ಇರಾನ್ 2 ವಾರಗಳ ಕದನ ವಿರಾಮ ಘೋಷಣೆ (US Iran Ceasefire) ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕದ ಫೈಟರ್ ಜೆಟ್‌ಗಳು ದಾಳಿ ಮಾಡಬೇಕಿತ್ತು, ಅಷ್ಟರಲ್ಲಿ ತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ದಾಳಿ ಎರಡು ವಾರಗಳ ಅವಧಿಗೆ ಸ್ಥಗಿತ: ಡೊನಾಲ್ಡ್ ಟ್ರಂಪ್

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ಆಧಾರದ ಮೇಲೆ 2 ವಾರಗಳ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ. ಅವರು (ಪಾಕ್ ಪ್ರಧಾನಿ, ಫೀಲ್ಡ್ ಮಾರ್ಷಲ್) ಇರಾನ್‌ ಮೇಲಿನ ವಿನಾಶಕಾರಿ ದಾಳಿಯನ್ನು ತಡೆಹಿಡಿಯುವಂತೆ ವಿನಂತಿಸಿದರು. ಇರಾನ್ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪುತ್ತಿದೆ. ಹೀಗಾಗಿ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಅವಧಿಗೆ ಸ್ಥಗಿತಗೊಳಿಸಲು ನಾನು ಕೂಡ ಒಪ್ಪುತ್ತೇನೆ. ಇದು ಎರಡು ಕಡೆಯಿಂದಲೂ ಕದನ ವಿರಾಮವಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹಾಗೆ ಮಾಡಲು ಕಾರಣವೇನೆಂದರೆ, ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಮೀರಿದ್ದೇವೆ. ಇರಾನ್‌ನೊಂದಿಗೆ ದೀರ್ಘಾವಧಿಯ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದದೊಂದಿಗೆ ನಾವು ಬಹಳ ಹತ್ತಿರದಲ್ಲಿದ್ದೇವೆ. ನಾವು ಇರಾನ್‌ನಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ, ಅದು ಮಾತುಕತೆಗೆ ಆಧಾರವಾಗಿದೆ ಎಂದು ನಂಬುತ್ತೇವೆ. ಆದರೆ ಎರಡು ವಾರಗಳ ಕಾಲಾವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಅನುವು ಮಾಡಿಕೊಡುತ್ತದೆ. ಅಧ್ಯಕ್ಷನಾಗಿ ಈ ದೀರ್ಘಕಾಲೀನ ಸಮಸ್ಯೆ ಪರಿಹಾರದ ಹಂತಕ್ಕೆ ತಲುಪಿರುವುದು ಗೌರವದ ಸಂಗತಿ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಸಂದೇಶ

ಇರಾನ್ ಪರವಾಗಿ, ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವಿಶ್ರಾಂತ ಪ್ರಯತ್ನ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಮುನೀರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. 15 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಮಾತುಕತೆಗಾಗಿ ಅಮೆರಿಕದ ವಿನಂತಿಯನ್ನು ಮತ್ತು ಇರಾನ್‌ನ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸುವ ಬಗ್ಗೆ ಅಮೆರಿಕ ಅಧ್ಯಕ್ಷರು ಮಾಡಿದ ಘೋಷಣೆಯನ್ನು ಪರಿಗಣಿಸಿ, ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಪರವಾಗಿ ನಾನು ಈ ಮೂಲಕ ಘೋಷಣೆ ಮಾಡುತ್ತಿದ್ದೇನೆ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಸಂದೇಶ ಬಿಡುಗಡೆ ಮಾಡಿದ್ದಾರೆ.

ಇರಾನ್ ವಿರುದ್ಧದ ದಾಳಿಗಳನ್ನು ಅಮೆರಿಕ ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ. ಎರಡು ವಾರಗಳ ಅವಧಿಗೆ ಇರಾನ್‌ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯದ ಮೂಲಕ, ತಾಂತ್ರಿಕ ಮಿತಿಗಳನ್ನು ಪರಿಗಣಿಸಿ ಹೊರ್ಮುಜ್ ಜಲಸಂಧಿ ಮೂಲಕ ಸುರಕ್ಷಿತ ಸಂಚಾರ ಸಾಧ್ಯವಾಗುತ್ತದೆ ಎಂದು ಸೈಯದ್ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ.

ಇದನ್ನೂ ಓದಿ:  ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!

ಈ ಬೆಳವಣಿಗೆಯಿಂದಾಗಿ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗಿದ್ದು, ಮಧ್ಯಪ್ರಾಚ್ಯ ದೇಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *