
ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚಿರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂಬುದು ತಿಳಿದಿರುವ ವಿಚಾರ. ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ (High Blood Pressure) ಸಮಸ್ಯೆ ಇರುವವರಿಗೆ ಉಪ್ಪು ಕಡಿಮೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ನಮಗೆ ಆರೋಗ್ಯಕರವಾಗಿ ಕಾಣುವ ಕೆಲವು ಆಹಾರಗಳಲ್ಲಿ ಕೂಡ ‘ಹಿಡನ್ ಸೋಡಿಯಂ’ ಇರುವುದರಿಂದ ಇದು ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾದರೆ ಯಾವ ಆಹಾರಗಳಲ್ಲಿ ಈ ರೀತಿಯ ಹಿಡನ್ ಸೋಡಿಯಂ ಇರುತ್ತದೆ, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪಿನ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಿಡನ್ ಸೋಡಿಯಂ ಎಂದರೇನು?
ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ. ನಾವು ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು “ಹಿಡನ್ ಸೋಡಿಯಂ” ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ಬಿಪಿ ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಜನರು ಬ್ರೆಡ್ ಅನ್ನು ಲಘು ಮತ್ತು ಆರೋಗ್ಯಕರ ಆಹಾರವೆಂದು ಭಾವಿಸುತ್ತಾರೆ. ಆದರೆ, ಒಂದು ಬ್ರೆಡ್ ಸ್ಲೈಸ್‌ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರೆಡ್ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿ, ಸಂಸ್ಕರಿಸಿದ ತಿಂಡಿಗಳಲ್ಲಿ ಉಪ್ಪು ಇರುತ್ತದೆ. ಇವು ಆರೋಗ್ಯಕರವೆಂದು ಭಾವಿಸಿ ಹೆಚ್ಚು ಸೇವಿಸುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ಯಾಕೆಟ್ ಮೇಲಿರುವ ಸೋಡಿಯಂ ಪ್ರಮಾಣವನ್ನು ಗಮನಿಸಿ ಆಹಾರವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ.
ಇದನ್ನೂ ಓದಿ: ಬಿಪಿ ಇರುವವರು ಬೇಸಿಗೆಯಲ್ಲಿ ಈ ವಿಷಯಗಳನ್ನು ಅಪ್ಪಿತಪ್ಪಿಯೂ ಮರೆಯಬೇಡಿ!
ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪುನ್ನು ಸೇವಿಸಬೇಕು?
ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಸೇವಿಸಬಾರದು. ಆದರೆ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್‌ಗಳಂತಹ ಆಹಾರಗಳಿಂದಲೇ ಹೆಚ್ಚುವರಿ ಉಪ್ಪು ದೇಹಕ್ಕೆ ಸೇರುತ್ತಿದೆ. ಈ ರೀತಿ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಬಿಪಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಿದರೆ ಅವರ ಆರೋಗ್ಯ ಇನ್ನಷ್ಟು ಹದಗೆಡಬಹುದು. ಹೆಲ್ತಿಯಾಗಿ ಕಾಣುವ ಆಹಾರಗಳಲ್ಲಿಯೂ ಹಿಡನ್ ಸೋಡಿಯಂ ಇರುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಸೇವಿಸುವಾಗ ಜಾಗ್ರತೆ ವಹಿಸಿ, ಲೇಬಲ್ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಗತ್ಯ. ಇದು ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ