ಬೆಂಗಳೂರು, (ಆಗಸ್ಟ್ 09): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಸಚಿವ ಯತೀಂದ್ರ ಅವರಿಗೆ ಮತ್ತೊಂದು ಪ್ರಮುಖ ಜವಾಬ್ದಾರಿ ಸಿಗುವುದು ಬಹುತೇಕ ಖಚಿತವಾಗಿದೆ. ಖಾಲಿ ಇರುವ ವಿಧಾನ ಪರಿಷತ್ ಸಭಾ ನಾಯಕನ ಹೊಣೆ ಯತೀಂದ್ರ ಸಿದ್ದರಾಮಯ್ಯನವರ ಹೆಗಲಿಗೆ ಬೀಳುವ ಸಾಧ್ಯತೆ ಇದ್ದು, ಪರಿಷತ್ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿರೋದೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎನ್ಎಸ್ ಬೋಸರಾಜ್ ಅವರು ಸಚಿವರಾಗಿದ್ದರು. ಜೊತೆಗೆ ವಿಧಾನಪರಿಷತ್ ಸಭಾನಾಯಕರಾಗಿದ್ದರು. ಅದರಂತೆ ಇದೀಗ ಯತೀಂದ್ರ ಸಿದ್ದರಾಮಯ್ಯನವರಿಗೆ ಸಭಾನಾಯಕ ಸ್ಥಾನ ಒಲಿಯಲಿದೆ.
ಇನ್ನು ಆಗಸ್ಟ್ 13 ರಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಪರಿಷತ್ ನಲ್ಲಿ ಆಡಳಿತ ಪಕ್ಷವನ್ನು ಯತೀಂದ್ರ ಮುನ್ನಡೆಸಲಿದ್ದಾರೆ. ಇನ್ನು ಯತೀಂದ್ರಗೆ ಸಭಾ ನಾಯಕ ಸ್ಥಾನದ ಮೂಲಕ ಸಿದ್ದರಾಮಯ್ಯ ಮುನಿಸು ಕೂಡ ತಣಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.