
ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ತಮ್ಮ ಹಳೆಯ ಕಳೆಯನ್ನು ಕಳೆದುಕೊಳ್ಳುತ್ತಿದೆ. ಆಗೊಂದು ಈಗೊಂದು ಹಿಟ್ ಬರುತ್ತಿವೆಯಾದರೂ ದಕ್ಷಿಣದ ಚಿತ್ರರಂಗಕ್ಕೆ ಹೋಲಿಸಿದರೆ, ಗೆಲುವಿನ ಸರಾಸರಿ ಕಡಿಮೆ. ಅಲ್ಲದೆ, ಬಾಲಿವುಡ್ ನಲ್ಲಿ ನೆಪೊಟಿಸಮ್ ಸಹ ಅತಿಯಾಗಿದ್ದು, ಹೊರಗಿನ ಪ್ರತಿಭಾವಂತರು ಬಾಲಿವುಡ್ಗೆ ಕಾಲಿಡುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಇದೀಗ ಇದಕ್ಕೆಲ್ಲ ಇತಿಶ್ರೀ ಹಾಡಲು, ಬಾಲಿವುಡ್‌ನಲ್ಲಿ ಹೊಸದೊಂದು ಪ್ರಯೋಗ ಶುರುವಾಗಿದೆ.
ಬಾಲಿವುಡ್ ಚಿತ್ರರಂಗದ ಬಾಗಿಲು ಸದಾ ‘ಇನ್ಸೈಡರ್’ ಮಾತ್ರ ತೆರೆದಿರುತ್ತದೆ ಎನ್ನಲಾಗುತ್ತದೆ. ಇದನ್ನು ಸುಳ್ಳು ಮಾಡಲೆಂದು ಹಾಗೂ ಹೊಸ ರೀತಿಯ ಕತೆಗಾರರನ್ನು, ನಿರ್ದೇಶಕರನ್ನು ಹುಟ್ಟುಹಾಕಲು ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ (SWA) ಹಮ್ಮಿಕೊಂಡಿರುವ ಪ್ರಯತ್ನದಿಂದಾಗಿ, ಪ್ರತಿಭಾವಂತ ಕಥೆಗಾರರು ಮತ್ತು ಲೇಖಕರಿಗೆ ನೇರವಾಗಿ ದೊಡ್ಡ ನಿರ್ಮಾಣ ಸಂಸ್ಥೆಗಳನ್ನು ತಲುಪುವ ಅವಕಾಶ ಸಿಗುತ್ತದೆ.
ಮುಂಬೈನಲ್ಲಿ ನಡೆಯಲಿರುವ ಈ ಮೆಗಾ ಇವೆಂಟ್‌ನಲ್ಲಿ, ಬಾಲಿವುಡ್‌ನ ಸುಮಾರು 40 ಪ್ರಮುಖ ನಿರ್ಮಾಣ ಸಂಸ್ಥೆಗಳು ಭಾಗವಹಿಸಲಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಈ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹೊಸ ಲೇಖಕರ ನಡುವೆ 1,000ಕ್ಕೂ ಹೆಚ್ಚು ಮುಖಾಮುಖಿ ಸಭೆಗಳು ನಡೆಯುತ್ತವೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ‘ಕತೆ ಹೇಳುವಿಕೆ’ (ಸ್ಟೋರಿ ಪಿಚ್ಚಿಂಗ್) ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್
ಬಾಲಿವುಡ್‌ನಲ್ಲಿ ಗಾಡ್‌ಫಾದರ್ ಇಲ್ಲದ ಅಥವಾ ಯಾವುದೇ ಸಂಪರ್ಕವಿಲ್ಲದ ಲೇಖಕರಿಗೆ ತಮ್ಮ ಕಥೆಗಳನ್ನು ದೊಡ್ಡ ನಿರ್ಮಾಪಕರಿಗೆ ವಿವರಿಸಲು ಇದು ಸುವರ್ಣಾವಕಾಶವಾಗಿತ್ತು. ಧರ್ಮಾ ಪ್ರೊಡಕ್ಷನ್ಸ್, ಎಕ್ಸೆಲ್ ಎಂಟರ್ಟೈನ್‌ಮೆಂಟ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ಸಂಸ್ಥೆಗಳ ಕ್ರಿಯೇಟಿವ್ ಹೆಡ್‌ಗಳು ಈ ಸಭೆಗಳಲ್ಲಿ ಭಾಗವಹಿಸಿ ಹೊಸ ಕಥೆಗಳನ್ನು ಆಲಿಸಿದ್ದಾರೆ. ಲೇಖಕರಿಗೆ ತಮ್ಮ ಕಥೆಯನ್ನು ಹೇಳಲು ನಿಗದಿತ ಸಮಯವನ್ನು ನೀಡಲಾಗಿತ್ತು . ಇದರಿಂದ ಪ್ರತಿ ಲೇಖಕರಿಗೂ ಸಮಾನ ಅವಕಾಶ ಸಿಕ್ಕಿತು.
ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಕಥೆಗಳ ಬರ ಎದುರಾಗಿದೆ ಎಂಬ ದೂರಿನ ನಡುವೆ, ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ ಈ ಹೆಜ್ಜೆ ಇಟ್ಟಿದೆ. ಕಥೆ ಆಯ್ಕೆಯಲ್ಲಿ ಪಾರದರ್ಶಕತೆ ತರುವುದು.
ಚಿತ್ರರಂಗದ ಬೆನ್ನೆಲುಬಾದ ಲೇಖಕರಿಗೆ ಸಿಗಬೇಕಾದ ಮನ್ನಣೆ ಮತ್ತು ಸಂಭಾವನೆಯನ್ನು ಕೊಡಿಸುವುದು. ಕೇವಲ ಸ್ಟಾರ್ ನಟರ ಮೇಲೆ ಅವಲಂಬಿತವಾಗದೆ, ಗಟ್ಟಿಯಾದ ಕಥೆಗಳ ಮೇಲೆ ಸಿನಿಮಾ ಮಾಡುವ ಸಂಸ್ಕೃತಿಯನ್ನು ಬೆಳೆಸುವುದು ಈ ಎಕ್ಸ್ಪೋನ ಉದ್ದೇಶವಾಗಿದೆ.
ಈ ಕಾರ್ಯಕ್ರಮದ ನಂತರ ಹಲವಾರು ಹೊಸ ಲೇಖಕರು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಚಿತ್ರರಂಗದ ಈ ಬದಲಾವಣೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಮತ್ತು ನವೀನ ಕಥೆಗಳು ಬೆಳ್ಳಿತೆರೆಯ ಮೇಲೆ ಬರಲು ಸಹಕಾರಿಯಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ