ಬೆಂಗಳೂರು, (ಏಪ್ರಿಲ್ 20): ದಾವಣಗೆರೆ ಉಪ ಚುನಾವಣೆಯ (Davanagere By Election Row) ಟಿಕೆಟ್ ಅಸಮಾಧಾನ ಕರ್ನಾಟಕ ಕಾಂಗ್ರೆಸ್ ನಲ್ಲಿ (Karnataka Congress) ಒಂದು ರೀತಿಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಟಿಕೆಟ್ ಕೈತಪ್ಪಿದ್ದರಿಂದ ಕೆಲ ಮುಸ್ಲಿಂ ನಾಯಕರು ಅಸಮಾಧಾನಗೊಂಡಿದ್ದು, ಇದೀಗ ಅವರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದೆ. ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ. ಇನ್ನು ನಸೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೂ ಕ್ರಮಕ್ಕೆ ಚಿಂತನೆಗಳು ನಡೆದಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಸಿಡಿದೆದ್ದಿರುವ ಮುಸ್ಲಿಂ ಸಮುದಾಯದ ಸಂಘಟನೆ, ಸಂಘ-ಸಂಸ್ಥೆಗಳು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿವೆ. ಕಾಂಗ್ರೆಸ್ ಪಕ್ಷ ರಾಜ್ಯದ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ರಾಜ್ಯದ ವಿವಿಧ ಪ್ರದೇಶಗಳ ಪ್ರಮುಖ ಮುಸ್ಲಿಮ್ ಸಂಘಟನೆಗಳು , ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪ್ರತಿನಿಧಿಗಳ ಜಂಟಿ ಪತ್ರ ಈ ಕೆಳಗಿಂತಿದೆ.
ಯಾರೆಗೆಲ್ಲಾ ಪತ್ರ?
ರಾಜ್ಯಸಭಾ ವಿಪಕ್ಷ ನಾಯಕ ಹಾಗು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖ್ಯಸಚೇತಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಎಐಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಢಿ ಇವರಿಗೆ ರಾಜ್ಯದ ವಿವಿಧ ಪ್ರದೇಶಗಳ ಪ್ರಮುಖ ಮುಸ್ಲಿಮ್ ಸಂಘಟನೆಗಳು , ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪ್ರತಿನಿಧಿಗಳ ಜಂಟಿ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಮುಸ್ಲಿಂ ನಾಯಕರ ಬೆನ್ನಿಗೆ ನಿಂತ ಸತೀಶ್ ಜಾರಕಿಹೊಳಿ, ಡಿಕೆಶಿ ಭೇಟಿಯ ಗುಟ್ಟು ರಟ್ಟು
ಪತ್ರದಲ್ಲೇನಿದೆ?
ಕರ್ನಾಟಕದ ಕಾಂಗ್ರೆಸ್ ಸರಕಾರ ಹಾಗೂ ಪಕ್ಷ ರಾಜ್ಯದ ಮುಸ್ಲಿಂ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ತೀವ್ರವಾಗಿ ನೊಂದು ರಾಜ್ಯದ ಎಲ್ಲ ಪ್ರದೇಶಗಳ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪರವಾಗಿ ನಾವು ಈ ಪತ್ರ ಬರೆಯುತ್ತಿದ್ದೇವೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮುಸ್ಲಿಮರು ಇಡೀ ದೇಶಕ್ಕೆ ಮಾದರಿಯಾಗುವಂತಹ ಒಂದು ಧನಾತ್ಮಕ ನಿರ್ಧಾರ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಕಾಂಗ್ರೆಸ್ ಅಲ್ಲದೆ ಬೇರೆ ಪಕ್ಷಗಳ ಆಯ್ಕೆ ಇದ್ದರೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಜಾತ್ಯತೀತ ಸರಕಾರ ಬರಬೇಕು ಎಂಬ ಕಾರಣಕ್ಕಾಗಿ ಮುಸ್ಲಿಮರು ಕಾಂಗ್ರೆಸ್ ಗೆ ಒಗ್ಗಟ್ಟಾಗಿ ಬೆಂಬಲಿಸಿದರು. ಅದರ ಪರಿಣಾಮವಾಗಿಯೇ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಪಕ್ಷ ತನ್ನನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಸರಕಾರದಲ್ಲಿ, ಆಡಳಿತಶಾಹಿಯಲ್ಲಿ, ಇತರ ಪ್ರಮುಖ ನೇಮಕಾತಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಈ ಸರಕಾರ ಸೂಕ್ತ ಪ್ರಾತಿನಿಧ್ಯ ಕೊಡಲೇ ಇಲ್ಲ. ಸಮುದಾಯಕ್ಕೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಈ ಬಗ್ಗೆ ಆಗಾಗ ಸರಕಾರದ, ಪಕ್ಷದ ಗಮನಕ್ಕೆ ತಂದರೂ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ ಹಾಗೂ ಕೊರತೆ ತುಂಬುವ ಕ್ರಮ ಕೈಗೊಳ್ಳಲಿಲ್ಲ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮುಸ್ಲಿಮರ ಕುರಿತ ಕಾಂಗ್ರೆಸ್ ನ ಈ ನಿರಂತರ ನಿರ್ಲಕ್ಷ್ಯ ಧೋರಣೆ ಈಗ ಮುಂದಿನ ಹಂತಕ್ಕೆ ತಲುಪಿರುವುದು ಸ್ಪಷ್ಟವಾಗಿದೆ. ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷ ತಾರತಮ್ಯದ ನೀತಿ ಅನುಸರಿಸುವುದು, ಅನ್ಯಾಯಯುತವಾಗಿ ನಡೆದುಕೊಳ್ಳುವುದು ಈಗ ಸರ್ವೇ ಸಾಮಾನ್ಯವಾಗಿದೆ ಎಂಬುದನ್ನು ಬಹಳ ಬೇಸರದಿಂದ ಹೇಳಬೇಕಾಗಿದೆ. ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಹಾಗೂ ಮತದಾನದ ಬಳಿಕ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯಿಂದ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ತೀವ್ರ ಆಘಾತವಾಗಿದೆ.
ಬೇಷರತ್ ಬೆಂಬಲ ನೀಡಿದ್ದೇ ಅಪರಾಧವೇ?
ನಾವು ಇಷ್ಟು ಗಟ್ಟಿಯಾಗಿ ಬೆಂಬಲಿಸಿದ ಪಕ್ಷ ನಮ್ಮೊಂದಿಗೆ ಇಷ್ಟು ಕೆಟ್ಟದಾಗಿ ಹೇಗೆ ನಡೆದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ರಾಜ್ಯದ ಮುಸಲ್ಮಾನರನ್ನು ಕಾಡುತ್ತಿದೆ. ನಾವು ಕಾಂಗ್ರೆಸ್ ಗೆ ಬೇಷರತ್ತಾಗಿ ಬೆಂಬಲ ನೀಡಿದ್ದೇ ನಮ್ಮ ಅಪರಾಧವೇ ಎಂಬ ಭಾವನೆ ಮುಸಲ್ಮಾನರಲ್ಲಿ ಈಗ ಮನೆ ಮಾಡುತ್ತಿದೆ. ಹೀಗೇ ಮುಂದುವರಿದರೆ ನಾವೂ ನಮ್ಮ ರಾಜಕೀಯ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಆಲೋಚನೆ ಈಗ ಸಮುದಾಯದಲ್ಲಿ ತೀವ್ರವಾಗಿ ಬೆಳೆಯುತ್ತಿದೆ. ಮೊದಲು ನ್ಯಾಯವಾಗಿ ನೀಡಲೇಬೇಕಾಗಿದ್ದ ಟಿಕೆಟ್ ಅನ್ನು ನಿರಾಕರಿಸಲಾಯಿತು, ಹಾಗೆ ನಿರಾಕರಿಸುವಾಗ ಮುಸ್ಲಿಂ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅಷ್ಟೇ ಅಲ್ಲ, ಟಿಕೆಟ್ ಕೇಳಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯದ ಜೊತೆ ನಡೆದುಕೊಂಡರು.
ಮುಸ್ಲಿಂ ಸಮುದಾಯದ ಜೊತೆ ಹಗೆ
ಇಷ್ಟು ಸಾಲದ್ದಕ್ಕೆ, ಉಪಚುನಾವಣೆಗೆ ಮತದಾನ ಮುಗಿದ ಕೂಡಲೇ ಮುಸ್ಲಿಂ ಸಮುದಾಯದ ಜೊತೆ ಹಗೆ ಸಾಧಿಸುವ ಹಾಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡಿತು. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ಸೂಕ್ತ ಕಾರಣ ನೀಡದೆ, ವಿವರಣೆಗೆ ಅವಕಾಶವನ್ನೂ ನೀಡದೆ ಏಕಾಏಕಿ ವಜಾ ಮಾಡಿ ಮನೆಗೆ ಕಳಿಸಲಾಯಿತು. ಕಾಂಗ್ರೆಸ್ ಪಕ್ಷದ ಈ ನಡೆ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಿಕೆಟ್ ನೀಡಲಿಲ್ಲ ಎಂಬ ನೋವಿಗೆ ಸಮಾಧಾನ ಮಾಡಿ ಮದ್ದೆರೆಯಬೇಕಾಗಿದ್ದ ಕಾಂಗ್ರೆಸ್, ಸಮುದಾಯದ ಜೊತೆ ಅತ್ಯಂತ ಸಂವೇದನಾರಹಿತವಾಗಿ ನಡೆದುಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ವರಿಷ್ಠರಿಂದ ಎತ್ತಿ ಕಟ್ಟುವ ಪ್ರಯತ್ನ
ಈ ಹಿಂದೆ ನೇರವಾಗಿಯೇ ಪಕ್ಷ ವಿರೋಧಿ ಕೆಲಸ ಮಾಡಿದ್ದ ಪ್ರಬಲ ಸಮುದಾಯಗಳ ಮುಖಂಡರ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಪಕ್ಷ ನಿಷ್ಠ ಮುಸ್ಲಿಂ ನಾಯಕರ ವಿರುದ್ಧ ಇಷ್ಟು ತರಾತುರಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಶಿಸ್ತುಕ್ರಮ ಎಂಬುದು ಕೇವಲ ಒಂದು ಸಮುದಾಯಕ್ಕೆ ಸೀಮಿತವೇ ಎಂಬ ಸಂಶಯ ಮೂಡುತ್ತಿದೆ. ಇನ್ನು ಕಾಂಗ್ರೆಸ್ ನ ಮುಸ್ಲಿಂ ಸಮುದಾಯದ ನಾಯಕರ ವಿರುದ್ಧ ಪಕ್ಷದಲ್ಲಿರುವ ಬೇರೆ ಮುಸ್ಲಿಂ ನಾಯಕರನ್ನೇ ಎತ್ತಿ ಕಟ್ಟುವ ತೀರಾ ಕೆಟ್ಟ ಪ್ರಯತ್ನವೂ ಕಾಂಗ್ರೆಸ್ ವರಿಷ್ಠರಿಂದ ನಡೆಯುತ್ತಿದೆಯೇ ಎಂಬ ಗಂಭೀರ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ.
ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ. ತನಗೆ ಸುಮಾರು 90% ಮತದಾನ ಮಾಡಿರುವ ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷದ ಈ ತೀವ್ರ ತಾರತಮ್ಯ ನೀತಿಯನ್ನು ನಾವು ಖಂಡಿಸುತ್ತೇವೆ.
ಡಿಕೆಶಿ ಹೇಳಿಕೆ ಮುಸ್ಲಿಂ ಸಮುದಾಯ ತಿರುಗೇಟು
ಮುಸಲ್ಮಾನರಿಗೆ ಕಾಂಗ್ರೆಸ್ ಕೊಟ್ಟಷ್ಟು ರಕ್ಷಣೆ ಬೇರೆ ಯಾವುದೇ ಪಕ್ಷ ಕೊಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ರಕ್ಷಣೆ ಈ ದೇಶದ ಸಂವಿಧಾನವು ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಹಕ್ಕಾಗಿದೆ. ಅದು ಯಾವುದೇ ಪಕ್ಷ ಯಾವುದೇ ಸಮುದಾಯಕ್ಕೆ ನೀಡಿರುವ ಕೊಡುಗೆಯಲ್ಲ. ಅದನ್ನು ಒಂದು ಸರಕಾರ ನೀಡುವುದು ಅದರ ಕರ್ತವ್ಯವೇ ಹೊರತು, ಅದು ಉಪಕಾರ ಅಥವಾ ಸಾಧನೆಯಲ್ಲ.
ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ
ಮತ ಹಾಕಿ ಗೆಲ್ಲಿಸಿದ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಅಧಿಕಾರದಲ್ಲಿ ಸರಿಯಾದ ಪಾಲು ನೀಡಬೇಕು, ನೀತಿ ನಿರೂಪಣೆಯಲ್ಲಿ ಪಾತ್ರ ನೀಡಬೇಕು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅದ್ಯಾವುದನ್ನೂ ಮಾಡದೆ, ಬೆಂಬಲಿಸಿ ಅಧಿಕಾರದ ಶಕ್ತಿ ನೀಡಿದ ಸಮುದಾಯವನ್ನು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೆ ನಡೆಸಿಕೊಳ್ಳುವುದು ಪರಮ ಅನ್ಯಾಯವಾಗಿದೆ. ಜಾತ್ಯತೀತ ಸರಕಾರ ಬರಬೇಕು ಎಂದು ಬೆಂಬಲ ನೀಡಿದ್ದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ.
ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಸರಕಾರದಲ್ಲಿ, ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಸಮುದಾಯಕ್ಕೆ ಆಗಿರುವ ನೋವಿಗೆ ಕಾಂಗ್ರೆಸ್ ಪಕ್ಷ ಕೂಡಲೇ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ.
ಹೀಗೆ ಮುಸ್ಲಿಂ ಸಂಘಟನೆಗಳು ವಿವರವಾಗಿ ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಪತ್ರವನ್ನು ಕಾಂಗ್ರೆಸ್ನ ಎಲ್ಲಾ ಹಿರಿಯ ನಾಯಕರಿಗೆ ರವಾನಿಸಿ ಎಚ್ಚರಿಕೆ ಸಂದೇಶ ರವಾನಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ