ಗಾಜಿಯಾಬಾದ್, ಏಪ್ರಿಲ್ 22: ಮಾವ, ಮಾವ ಎಂದು ಮುದ್ದಾಗಿ ಕರೆಯುತ್ತಾ ಮನೆತುಂಬ ಓಡಾಡಿಕೊಂಡಿದ್ದ 4 ವರ್ಷದ ಹೆಣ್ಣುಮಗುವಿನ ಮೇಲೆ ಆ 55 ವರ್ಷದ ಮಾವನ ಕಣ್ಣು ಬಿದ್ದಿತ್ತು. ತನ್ನ ಸ್ವಂತ ತಂಗಿಯ 4 ವರ್ಷದ ಮಗುವನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಆ ವ್ಯಕ್ತಿ ಆ ಮಗುವಿನ ಮೇಲೆ ಅತ್ಯಾಚಾರ (Child Abuse) ನಡೆಸಿದ್ದ. ಬಳಿಕ ಈ ವಿಷಯವನ್ನು ಆ ಮಗು ಮನೆಯವರಿಗೆ ಹೇಳಬಹುದು ಎಂಬ ಭಯದಿಂದ ಮಗುವನ್ನು ಕೊಲೆ ಮಾಡಿದ್ದ. ಬಳಿಕ ತನಗೇನೂ ಗೊತ್ತೇ ಇಲ್ಲವೆಂಬಂತೆ ಮಗುವಿನ ಶವದ ಮುಂದೆ ಮನೆಯವರ ಜೊತೆ ಅತ್ತು ನಾಟಕವಾಡಿದ್ದ.
ಗಾಜಿಯಾಬಾದ್ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಕಾರಿನಲ್ಲಿ ಮಗುವಿನ ಶವವನ್ನು ಮುಚ್ಚಿಡಲಾಗಿತ್ತು. ಆ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು ಸೋದರಮಾವನೇ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಇದರಿಂದ ಆತನ ಕುಟುಂಬ ಆಘಾತಗೊಂಡಿತ್ತು. ಅವರಿಗೆ ಇಡೀ ಊರಿನಲ್ಲಿ ತಲೆ ಎತ್ತಿಕೊಂಡು ತಿರುಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊಲೆ ಆರೋಪಿ ಜಾಸಿಮ್ ತಲೆಮರೆಸಿಕೊಂಡಿದ್ದ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆತನನ್ನು ಹಿಡಿದುಕೊಟ್ಟವರಿಗೆ 50,000 ರೂ. ಬಹುಮಾನ ಘೋಷಿಸಲಾಗಿತ್ತು.
ಆತನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದ್ದರು. ಆದರೆ, ಭಾನುವಾರ ತಡರಾತ್ರಿ ತೀಲಾ ಮಾಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಜಾಸಿಮ್ನನ್ನು ಕೊಂದಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಇದರಿಂದ ಪೊಲೀಸರು ಎನ್ಕೌಂಟರ್ ನಡೆಸಿದ್ದರು. ದೆಹಲಿ ರೈಲು ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆತನನ್ನು ಪತ್ತೆಹಚ್ಚಲಾಯಿತು.
ಇದನ್ನೂ ಓದಿ: ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಹೋದರನಿಂದಲೇ ನಡೀತು ಚಿಕ್ಕಪ್ಪನ ಮಗನ ಬರ್ಬರ ಕೊಲೆ; ಮೂವರು ವಶಕ್ಕೆ
ಲೋನಿಯ ಬಂತ್ಲಾ ಕಾಲುವೆಯ ಬಳಿ ಜಾಸಿಮ್ ಇದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡಗಳು ಬಲೆ ಬೀಸಿ ಆತನನ್ನು ಹಿಡಿಯಲು ಪ್ರಯತ್ನಿಸಿದವು. ಆಗ ಆತ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಮಿತ್ ಮತ್ತು ಇಕ್ಬಾಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಜಾಸಿಮ್ ಹತ್ಯೆಯಾದ ಸುದ್ದಿ ತಿಳಿದರೂ ಅವರ ಕುಟುಂಬದವರು ಆತನ ಶವವನ್ನು ವಶಕ್ಕೆ ಪಡೆದು, ಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ. ಆತ ಮಗುವನ್ನು ಕೊಂದಿ ದಿನವೇ ನಮ್ಮೆಲ್ಲರ ಪಾಲಿಗೆ ಸತ್ತುಹೋಗಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ