ಚಿಕ್ಕಬಳ್ಳಾಪುರ, ಏಪ್ರಿಲ್ 25: ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿ ಸುಪ್ರೀತ್ ಕೆಆರ್ ಜನಿವಾರವನ್ನು ಬಲವಂತವಾಗಿ ಕತ್ತರಿಸಿ ಕಸದ ಬುಟ್ಟಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಏಪ್ರಿಲ್ 23ರಂದು ಬೆಳಗ್ಗೆ 9:45ಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ಸುಪ್ರೀತ್, ತಪಾಸಣೆ ವೇಳೆ ಜನಿವಾರ ಧರಿಸಿರುವುದು ಪತ್ತೆಯಾಗಿತ್ತು. ‘ಜನಿವಾರವನ್ನು ನಾನೇ ತೆಗೆದು ಇಟ್ಟುಕೊಳ್ಳುತ್ತೇನೆ ಎಂದರೂ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಬದಲಿಗೆ, ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ಕತ್ತರಿಯಿಂದ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದರು ಎಂದು ಸುಪ್ರೀತ್ ಆರೋಪಿಸಿದ್ದಾರೆ.
ಈ ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದೆ. ಕೇವಲ ಎಂಟು ದಿನಗಳ ಹಿಂದೆ ಉಪನಯನ ನಡೆದಿತ್ತು. ಪರೀಕ್ಷೆ ಮುಗಿದ ನಂತರ ಕಸದ ಬುಟ್ಟಿಯಿಂದಲೇ ಜನಿವಾರವನ್ನು ಹುಡುಕಿ ತೆಗೆದುಕೊಂಡು ಹೋದೆ ಎಂದು ಸುಪ್ರೀತ್ ತಿಳಿಸಿದ್ದಾರೆ. ಸುಪ್ರೀತ್ ಜತೆ ‘ಟಿವಿ9’ ಚಿಕ್ಕಬಳ್ಳಾಪುರ ಪ್ರತಿನಿಧಿ ಭೀಮಪ್ಪ ಪಾಟೀಲ್ ನಡೆಸಿರುವ ಮಾತುಕತೆಯ ವಿಡಿಯೋ ಇಲ್ಲಿದೆ.
ಆರೋಪ ಅಲ್ಲಗಳೆದ ಅಧಿಕಾರಿ
ಏತನ್ಮಧ್ಯೆ ಜನಿವಾರ ಕತ್ತರಿಸಿ ಬಿಸಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಸಮವಸ್ತ್ರ ಸಂಹಿತಾಧಿಕಾರಿಯಾಗಿದ್ದ ದೊಡ್ಡ ಈರಪ್ಪ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಆರೋಪವನ್ನು ಅಲ್ಲಗಳೆದಿದ್ದಾರೆ. ಕೇಂದ್ರದಲ್ಲಿ ಕೆ.ಇ.ಎ ನಿಯಮಾವಳಿಗಳಂತೆ ವಿದ್ಯಾರ್ಥಿಗಳ ಪರಿಶೀಲನೆ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಯ ಜನಿವಾರ ಕತ್ತರಿಲ್ಲ, ತೆಗೆಸಿಲ್ಲ, ಬಿಸಾಡಿಲ್ಲ. ಆದರೂ ಯಾಕೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ