ಇಂಡಿಯನ್ ಪ್ರೀಮಿಯರ್ ಲೀಗ್ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 222 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 19.2 ಓವರ್ಗಳಲ್ಲಿ 228 ರನ್ ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಈ ಟೂರ್ನಿಯ ಆರಂಭದಲ್ಲೇ ನಾವು ಪ್ರತಿ ಪಂದ್ಯವನ್ನು ಕೇವಲ ಒಂದು ‘ಆಟ’ವಾಗಿ ಪರಿಗಣಿಸಲು ನಿರ್ಧರಿಸಿದ್ದೆವು. ಹಿಂದಿನ ಪಂದ್ಯದಲ್ಲಿ ನಾವು ಸೋತಾಗ, ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಮುಂದೆ ಸಾಗಿದ್ದೆವು. ಇಂದಿನ ಪಂದ್ಯದಲ್ಲೂ ಅದೇ ಮಾಡಿದ್ದೇವೆ. ಬೌಲಿಂಗ್ನಲ್ಲಿ ಪಂಜಾಬ್ ತಂಡವನ್ನು ಇನ್ನೂ ಕಡಿಮೆ ರನ್ಗಳಿಗೆ ನಿಯಂತ್ರಿಸಬಹುದಿತ್ತು, ಆದರೆ ಬ್ಯಾಟರ್ಗಳು ಆ ಕೊರತೆಯನ್ನು ನೀಗಿಸಿದರು.
ಇದಾಗ್ಯೂ ನಮ್ಮ ತಂಡದ ಸೋತಾಗ ಕೆಲವರು ಕಟುವಾಗಿ ಟೀಕಿಸಿದ್ದಾರೆ. ಆದರೆ ಇಂತಹ ಟೀಕೆಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊರಗಿನ ಟೀಕೆಗಳ ಬಗ್ಗೆ ಯಾವುದೇ ನಮಗೆ ಚಿಂತೆಯಿಲ್ಲ, ಯಾರು ಏನೇ ಹೇಳಿದರೂ ನಮ್ಮ ಪ್ರದರ್ಶನ ನಾವು ನೀಡುತ್ತೇವೆ. ಟೀಕೆಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಅಂತಹ ಟೀಕೆಗಳಿಗೆ ಕ್ಯಾರೇ ಮಾಡಲ್ಲ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ಈ ಸೀಸನ್ನಲ್ಲಿ ರಾಜಸ್ಥಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಕೇಳಿಬರುತ್ತಿದ್ದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪರಾಗ್, ಮಧ್ಯಮ ಕ್ರಮಾಂಕದ ಬಗ್ಗೆ ನಮಗೆ ಯಾವುದೇ ಆತಂಕವಿರಲಿಲ್ಲ. ಆ ಚಿಂತೆಗಳೆಲ್ಲವೂ ಕೇವಲ ಹೊರಗಿನವರಿಗೆ, ಕಾಮೆಂಟೇಟರ್ಗಳಿಗೆ ಮತ್ತು ವೀಕ್ಷಕರಿಗೆ ಮಾತ್ರ ಇತ್ತು. ನಮ್ಮ ಆಟಗಾರರ ಸಾಮರ್ಥ್ಯದ ಮೇಲೆ ನಮಗೆ ಅಪಾರ ನಂಬಿಕೆಯಿದೆ. ಅಗ್ರ ಕ್ರಮಾಂಕ ವಿಫಲವಾದಾಗ ಮಧ್ಯಮ ಕ್ರಮಾಂಕ ಅಥವಾ ಕೆಳ ಕ್ರಮಾಂಕದ ಆಟಗಾರರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ, ಅದು ಇಂದು ಸಾಬೀತಾಗಿದೆ ಎಂದು ಪರಾಗ್ ಟೀಕಾಗಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ವಿಕೆಟ್ ಉಳಿಸಿಕೊಳ್ಳುವುದು ಮತ್ತು ರನ್-ರೇಟ್ ಕುಸಿಯದಂತೆ ನೋಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆರಂಭವು ಕೆಲಸವನ್ನು ಸುಲಭಗೊಳಿಸಿತು. ಪವರ್ಪ್ಲೇ ನಂತರ ರನ್ ವೇಗ ಸ್ವಲ್ಪ ತಗ್ಗಿದರೂ, ತಂಡವು ಮತ್ತೆ ಲಯ ಕಂಡುಕೊಂಡಿತು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಡೊನೊವನ್ ಫೆರೇರಾ ಮತ್ತು ಶುಭಂ ದುಬೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅವರಿಬ್ಬರ ಆಟ ಅದ್ಭುತವಾಗಿತ್ತು. ಪಂಜಾಬ್ ಬೌಲರ್ಗಳು ಸ್ಲೋ ಬಾಲ್ಗಳ ಮೂಲಕ ನಮಗೆ ಒತ್ತಡ ಹೇರಬಹುದು ಎಂದು ನಾನು ಭಾವಿಸಿದ್ದೆ, ಆದರೆ ಫೆರೇರಾ ಮತ್ತು ದುಬೆ ಅಪ್ರತಿಮ ಪ್ರದರ್ಶನ ನೀಡಿದರು. ಅವರ ಈ ಜವಾಬ್ದಾರಿಯುತ ಬ್ಯಾಟಿಂಗ್ ಪರಿಣಾಮ ನಾವು ಸುಲಭವಾಗಿ ಗೆಲ್ಲುವಂತಾಯಿತು ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ಇದನ್ನೂ ಓದಿ: ಬಾಬರ್ ಶತಕಕ್ಕೆ ವಿಶ್ವ ದಾಖಲೆಯೇ ಧೂಳೀಪಟ
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನುಳಿದ 5 ಮ್ಯಾಚ್ಗಳಲ್ಲಿ 2 ಗೆಲುವು ದಾಖಲಿಸಿದರೆ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ಗೇರುವುದು ಖಚಿತವಾಗಲಿದೆ.