ಕೊಪ್ಪಳ, ಏ.29: ರಾಜ್ಯದ ಹಲವು ಕಡೆ ಲೋಕಯುಕ್ತ ದಾಳಿಗಳು ನಡೆಯುತ್ತಿದೆ. ಭಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ದ್ವಿತೀಯ ದರ್ಜೆ ಸಹಾಯಕ (SDA) ರಂಜಿತ್ ಎಂಬುವವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶೋರೂಮ್ ಟ್ರೇಡ್ ಲೈಸೆನ್ಸ್ ನೀಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಈ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ದೂರುದಾರರಾದ ನಯೀಮ್ ಎಂಬುವವರು ಕುಷ್ಟಗಿ, ಕಾರಟಗಿ ಹಾಗೂ ಹುಲಿಗಿಯಲ್ಲಿ ಹೊಸ ಶೋರೂಮ್ಗಳನ್ನು ತೆರೆಯಲು ಪರವಾನಿಗೆ (Trade License) ಕೋರಿ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಈ ಪರವಾನಿಗೆ ನೀಡಲು ಎಸ್ಡಿಎ ರಂಜಿತ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ನಯೀಮ್ ಅವರು ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ರಂಜಿತ್ ಅವರು 21 ಸಾವಿರ ರೂಪಾಯಿ ಲಂಚದ ಹಣವನ್ನು ವಿನಯ್ ಎಂಬಾತನ ಕೈಗೆ ನೀಡುವಂತೆ ಸೂಚಿಸಿದಾಗ, ರಾಯಚೂರು ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದೆ. ಸದ್ಯ ಆರೋಪಿ ರಂಜಿತ್ನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ