ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಶಕಗಳಿಂದ ತಮಿಳುನಾಡು ರಾಜಕೀಯವನ್ನು ನಿಯಂತ್ರಿಸುತ್ತಿದ್ದ ಎರಡು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ವಿಜಯ್ (Vijay) ಪುಡಿಪುಡಿ ಮಾಡಿದ್ದಾರೆ. ಈ ಅಭೂತಪೂರ್ವ ಯಶಸ್ಸಿಗೆ ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದ್ದು, ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಪೋಸ್ಟ್ ಈಗ ಗಮನ ಸೆಳೆಯುತ್ತಿದೆ.
1. ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅಭೂತಪೂರ್ವ ಗೆಲುವು.
2. ವಿಜಯ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.
3. ಸಂದೀಪ್ ರೀತಿಯೇ ಹಲವು ಸೆಲೆಬ್ರಿಟಿಗಳಿಂದ ದಳಪತಿ ವಿಜಯ್ಗೆ ಅಭಿನಂದನೆ.
‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ವಿಜಯ್ ಅವರನ್ನು ಶ್ಲಾಘಿಸಿದ್ದಾರೆ. ‘ಸಿನಿಮಾ ಏನನ್ನು ಮಾಡಬಲ್ಲದು ಎಂಬುದಕ್ಕೆ ಇದೇ ಸಾಕ್ಷಿ. ಇದು ಜನರನ್ನು ಪ್ರೇರೇಪಿಸುತ್ತದೆ, ವ್ಯವಸ್ಥೆಯನ್ನು ಅಲ್ಲಾಡಿಸುತ್ತದೆ ಮತ್ತು ಒಬ್ಬ ವ್ಯಕ್ತಿಯ ಇರುವಿಕೆಯನ್ನು ಶಕ್ತಿಯನ್ನಾಗಿ ಬದಲಾಯಿಸುತ್ತದೆ. ಇಲ್ಲಿ ಸಿನಿಮಾ ಅಧಿಕಾರ ನಡೆಸುತ್ತಿದೆ. ಇದು ಕೇವಲ ಪ್ರಚಾರವಲ್ಲ, ಸದ್ದು ಗದ್ದಲ ಅಲ್ಲ, ಇದು ಅಪ್ಪಟ ಶಕ್ತಿ. ವಿಜಯ್ ಸರ್ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
ಈ ಗೆಲುವಿನ ಮೂಲಕ ದಳಪತಿ ವಿಜಯ್ ಅವರು ಹೊಸ ಅಧ್ಯಾಯ ಆರಂಭಿಸಿದ್ದಾರೆ. ಸಿನಿಮಾದಿಂದ ಬಂದು ಸಿಎಂ ಪಟ್ಟಕ್ಕೇರಿದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ಸಾಲಿಗೆ ಈಗ ವಿಜಯ್ ಕೂಡ ಸೇರ್ಪಡೆಯಾಗಿದ್ದಾರೆ. ಪರದೆಯ ಮೇಲಿನ ವರ್ಚಸ್ಸನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ.
ದಕ್ಷಿಣ ಭಾರತದ ಸ್ಟಾರ್ ನಟರು ಮಾತ್ರವಲ್ಲದೇ, ಬಾಲಿವುಡ್ ಕಲಾವಿದರು ಕೂಡ ವಿಶ್ ಮಾಡಿದ್ದಾರೆ. ರಿತೇಶ್ ದೇಶ್ಮುಖ್ ಅವರು ವಿಜಯ್ ಅವರ ಗೆಲುವನ್ನು ಕೊಂಡಾಡಿದ್ದಾರೆ. ‘ಫಲಿತಾಂಶ ಹೊರಬಿದ್ದಿದೆ! ವಿಜಯ್ ಅವರಿಗೆ ಈ ಸ್ಮರಣೀಯ ಗೆಲುವಿಗಾಗಿ ಅಭಿನಂದನೆಗಳು. ಜನರ ಏಳಿಗೆಗಾಗಿ ನೀವು ದಣಿವರಿಯದೇ ಕೆಲಸ ಮಾಡುವಂತಾಗಲಿ’ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್ಜಿವಿ
ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಗಲಿ. ಇನ್ನಷ್ಟು ಯುವ ಜನರಿಗೆ ನಿಮ್ಮ ಈ ಸಾಧನೆಯು ಸ್ಫೂರ್ತಿಯಾಗಲಿ’ ಎಂದು ರಿಷಬ್ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 5:42 pm, Tue, 5 May 26