ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ರಾಜ್ಯ ಸಚಿವರಾಗಿದ್ದ ಮನೋಜ್ ತಿವಾರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಟಿಕೆಟ್ಗಾಗಿ 5 ಕೋಟಿ ಬೇಡಿಕೆ?
ಪಕ್ಷ ತೊರೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಿವಾರಿ, ಟಿಎಂಸಿ ನಾಯಕತ್ವದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಈ ಬಾರಿ ನನಗೆ ಶಿಬ್ಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಇದಕ್ಕೆ ಕಾರಣ ನಾನು ಪಕ್ಷ ಕೇಳಿದ 5 ಕೋಟಿ ರೂಪಾಯಿ ಹಣವನ್ನು ನೀಡಲು ನಿರಾಕರಿಸಿದ್ದು. ನನ್ನಂತೆ ಸುಮಾರು 70 ರಿಂದ 72 ಅಭ್ಯರ್ಥಿಗಳು ಟಿಕೆಟ್ಗಾಗಿ ಇಷ್ಟೇ ಪ್ರಮಾಣದ ಹಣ ನೀಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಹಿರಿಯ ಸಚಿವರ ವಿರುದ್ಧ ಕಿಡಿ:
ನಿರ್ಗಮಿತ ಹಿರಿಯ ಕ್ರೀಡಾ ಸಚಿವ ಮನೋಜ್ ತಿವಾರಿ, ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅರೂಪ್ ಬಿಸ್ವಾಸ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಬಂಗಾಳದಲ್ಲಿ ಸರಿಯಾದ ಕ್ರೀಡಾ ನೀತಿಯನ್ನು ಜಾರಿಗೆ ತರುವಲ್ಲಿ ಬಿಸ್ವಾಸ್ ವಿಫಲರಾಗಿದ್ದಾರೆ ಮತ್ತು ಕ್ರೀಡಾ ಇಲಾಖೆಯ ಬಜೆಟ್ ಬಳಕೆಯಲ್ಲೂ ಪಾರದರ್ಶಕತೆ ಇಲ್ಲ ಎಂದು ಅವರು ದೂರಿದ್ದಾರೆ.
ಮೆಸ್ಸಿ ಕಾರ್ಯಕ್ರಮದ ವಿವಾದ:
ಇತ್ತೀಚೆಗೆ ನಡೆದ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿಯ ಕಾರ್ಯಕ್ರಮವು “ಸಂಪೂರ್ಣ ಅವ್ಯವಸ್ಥೆ”ಯಿಂದ ಕೂಡಿತ್ತು ಎಂದು ಅವರು ಬಣ್ಣಿಸಿದ್ದಾರೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾದ ಆ ಕಾರ್ಯಕ್ರಮದಿಂದ ತಾವು ಉದ್ದೇಶಪೂರ್ವಕವಾಗಿಯೇ ದೂರ ಉಳಿದಿದ್ದಾಗಿ ಇದೇ ವೇಳೆ ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ.
ಮುಂದಿನ ನಡೆ ಏನು?
ಪಕ್ಷದ ಸೋಲಿಗೆ ಭ್ರಷ್ಟಾಚಾರವೇ ಮುಖ್ಯ ಕಾರಣ ಎಂದಿರುವ ಮನೋಜ್ ತಿವಾರಿ, ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಉದ್ದೇಶ ತಮಗಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಿಂದ ಬ್ರೇಕ್ ಪಡೆದು, ಕ್ರಿಕೆಟ್ ಕೋಚಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಮನೋಜ್ ತಿವಾರಿ ಅವರ ಈ ಬಹಿರಂಗ ಹೇಳಿಕೆಯು 15 ವರ್ಷಗಳ ಕಾಲ ಆಡಳಿತ ನಡೆಸಿದ ಟಿಎಂಸಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅದರಲ್ಲೂ ನೋಟಿಗೆ ಸೀಟು ಎಂಬ ಗಂಭೀರ ಆರೋಪವು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
ಮನೋಜ್ ತಿವಾರಿ ವೃತ್ತಿಜೀವನ:
ಟೀಮ್ ಇಂಡಿಯಾ ಪರ 15 ಏಕದಿನ ಪಂದ್ಯಗಳನ್ನಾಡಿರುವ ಮನೋಜ್ ತಿವಾರಿ ಒಟ್ಟು 287 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 1 ಇನಿಂಗ್ಸ್ನಲ್ಲಿ ಮಾತ್ರ ಬ್ಯಾಟ್ ಮಾಡಿದ್ದರು. ಈ ವೇಳೆ 15 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಸಿಸಿಐ ಕಡೆಯಿಂದ ಶೀಘ್ರದಲ್ಲೇ ಕಹಿ ಸುದ್ದಿ!
ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನೋಜ್ ತಿವಾರಿ ಕೊಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 98 ಪಂದ್ಯಗಳನ್ನಾಡಿರುವ ಅವರು ಒಟ್ಟು 1686 ರನ್ ಬಾರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್ನಿಂದ 7 ಅರ್ಧಶತಕಗಳು ಮೂಡಿಬಂದಿದ್ದವು.
Published On – 7:27 am, Wed, 6 May 26