ನವದೆಹಲಿ, ಮೇ 7: ಭಾರತೀಯ ರಿಸರ್ವ್ ಬ್ಯಾಂಕ್ (RBI), ಬ್ಯಾಂಕುಗಳು ಸಾಲಕ್ಕೆ ಅಡಮಾನವಾಗಿ ಪಡೆದುಕೊಳ್ಳುವ ಸ್ಥಿರಾಸ್ತಿಗಳ (Immovable Assets) ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ಕರಡು ನಿಯಮಗಳನ್ನು ಹೊರಡಿಸಿದೆ. ಇದರ ಮುಖ್ಯ ಉದ್ದೇಶ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಾಗಿದೆ.
ಬ್ಯಾಂಕಿನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ನೀವು ಅಡವಾಗಿ ಇಡುವ ಮನೆ ಇತ್ಯಾದಿ ಆಸ್ತಿಯನ್ನು ಬ್ಯಾಂಕುಗಳು ಸಾಮಾನ್ಯವಾಗಿ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಸಾಲ ತೀರಿಸಲು ವಿಫಲರಾದಾಗ, ಮತ್ತು ಸಾಲ ವಸೂಲಿ ಮಾಡುವ ಇತರ ಎಲ್ಲಾ ಮಾರ್ಗೋಪಾಯಗಳು ಮುಗಿದ ನಂತರ ಕೊನೆಯ ಅಸ್ತ್ರವಾಗಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಇಂತಹ ಆಸ್ತಿಗಳನ್ನು ಬ್ಯಾಂಕಿಂಗ್ ನಿಯಮಾವಳಿಗಳ ಅಡಿಯಲ್ಲಿ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಆರ್ಬಿಐ ಈಗ ಸ್ಪಷ್ಟ ಚೌಕಟ್ಟು ನೀಡಿದೆ.
ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್
ಆಸ್ತಿಗಳ ವಿಲೇವಾರಿಗೆ ನಿರ್ದಿಷ್ಟ ಕಾಲಮಿತಿ
ಬ್ಯಾಂಕುಗಳು ಅಂತಹ ಆಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ. ಸಾಲವನ್ನು ಎನ್ಪಿಎ ಎಂದು ವರ್ಗೀಕರಣ ಮಾಡಿದ ಬಳಿಕ 7 ವರ್ಷದವರೆಗೆ ಮಾತ್ರ ಅಡಮಾನ ಆಸ್ತಿಯನ್ನು ಇಟ್ಟುಕೊಳ್ಳಬಹುದು. ಅಷ್ಟರೊಳಗೆ ಈ ಆಸ್ತಿಯನ್ನು ಮಾರಿ, ಸಾಲದ ಹಣವನ್ನು ವಸೂಲಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಗದಿಪಡಿಸಿದ ಸಮಯದಲ್ಲಿ ಮಾರಾಟ ಮಾಡಲು ಸಾಧ್ಯವಾಗದಿದ್ದರೆ, ಅದಕ್ಕೆ ಬ್ಯಾಂಕುಗಳು ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ.
ಬ್ಯಾಂಕುಗಳ ಮೇಲಾಗುವ ಪರಿಣಾಮ
ಬ್ಯಾಂಕುಗಳು ಅಂತಹ ಆಸ್ತಿಗಳ ಮೌಲ್ಯವನ್ನು ಕಾಲಕಾಲಕ್ಕೆ ಮರುಮೌಲ್ಯೀಕರಣ (Revaluation) ಮಾಡಬೇಕು. ಇದರಿಂದ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ನಲ್ಲಿ ಆಸ್ತಿಯ ನೈಜ ಮೌಲ್ಯ ಪ್ರತಿಫಲಿಸುತ್ತದೆ. ಇದು ಬ್ಯಾಂಕುಗಳ ಆರ್ಥಿಕ ಶಿಸ್ತನ್ನು ಕಾಪಾಡಲು ನೆರವಾಗುತ್ತದೆ.
ಸಾಲಗಾರರಿಗೆ ಏನು ಲಾಭ?
ಈ ನಿಯಮಗಳಿಂದ ಸಾಲಗಾರರಿಗೂ ಅನುಕೂಲವಿದೆ. ಆಸ್ತಿ ಮಾರಾಟದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದರಿಂದ, ಆಸ್ತಿಯು ಸರಿಯಾದ ಮಾರುಕಟ್ಟೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಹೆಚ್ಚು. ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕೆ ಆಸ್ತಿ ಮಾರಾಟವಾದರೆ, ಉಳಿದ ಹಣವನ್ನು ಸಾಲಗಾರನಿಗೆ ಮರಳಿಸುವುದು ಸುಲಭವಾಗುತ್ತದೆ.
ಇದನ್ನೂ ಓದಿ: ಟ್ರಂಪ್ ವಿರುದ್ಧ ಸುಂಕದ ಕೇಸ್ ಗೆದ್ದ ಭಾರತೀಯ ಮೂಲದ ವ್ಯಕ್ತಿಯ ಅಚ್ಚರಿಯ ನಿಜ ಜೀವನದ ಕಥೆ ಇದು
ಒಂದಕ್ಕೆ ಸುಸ್ತಿದಾರನಾದರೆ ಎಲ್ಲದಕ್ಕೂ ಸುಸ್ತಿದಾರನೇ…
ಒಬ್ಬ ವ್ಯಕ್ತಿ ಒಂದು ಬ್ಯಾಂಕ್ನಲ್ಲಿ ವಿವಿಧ ಸಾಲ ಮಾಡಿದ್ದು, ಅವುಗಳ ಪೈಕಿ ಯಾವುದೇ ಒಂದು ಸಾಲವನ್ನು ತೀರಿಸಲು ವಿಫಲನಾದರೆ, ಸುಸ್ತಿದಾರ ಎನಿಸುತ್ತಾರೆ. ಒಂದು ಸಾಲಕ್ಕೆ ಸುಸ್ತಿದಾರನೆನಿಸಿದರೆ, ಆತ ಮಾಡಿದ ಇತರ ಸಾಲವನ್ನೂ ಎನ್ಪಿಎ ಎಂದೇ ಪರಿಗಣಿಸಿ ಕ್ರಮ ತೆಗೆದುಕೊಳ್ಳಬಹುದು.
ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತ ಅವಕಾಶ
ಇದು ಸದ್ಯಕ್ಕೆ ‘ಕರಡು’ (Draft) ಹಂತದಲ್ಲಿದೆ. ಆರ್ಬಿಐ ಇದರ ಬಗ್ಗೆ ಬ್ಯಾಂಕಿಂಗ್ ತಜ್ಞರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಎಲ್ಲರ ಸಲಹೆಗಳನ್ನು ಪರಿಗಣಿಸಿದ ನಂತರ ಅಂತಿಮ ಆದೇಶ ಹೊರಬೀಳಲಿದೆ.
ಒಟ್ಟಿನಲ್ಲಿ, ಬ್ಯಾಂಕುಗಳು ಸುಸ್ತಿದಾರರ ಆಸ್ತಿಯನ್ನು ವಶಪಡಿಸಿಕೊಂಡ ನಂತರ ಅದನ್ನು ಎಷ್ಟು ದಿನ ಇಟ್ಟುಕೊಳ್ಳಬಹುದು ಮತ್ತು ಹೇಗೆ ವಿಲೇವಾರಿ ಮಾಡಬೇಕು ಎಂಬ ಗೊಂದಲಗಳಿಗೆ ಈ ಹೊಸ ನಿಯಮಗಳು ತೆರೆ ಎಳೆಯಲಿವೆ. ಇದರಿಂದ ಬ್ಯಾಂಕುಗಳ ವಸೂಲಾತಿ ಪ್ರಕ್ರಿಯೆ ವೇಗಗೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ