ಮಾವು ಮೇಳಕ್ಕೆ ವಿರೋಧ (ಎಐ ಚಿತ್ರ)Image Credit source: tv9 kannada
ಬೆಂಗಳೂರು, ಮೇ 07: ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ನಾಳೆಯಿಂದ ತೋಟಗಾರಿಕೆ ಇಲಾಖೆಯು ಹಮ್ಮಿಕೊಂಡಿರುವ ‘ಮಾವು ಮೇಳ’ಕ್ಕೆ (Mango Mela) ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ (CPWA) ತೀವ್ರ ವಿರೋಧ ವ್ಯಕ್ತಪಡಿಸಿದೆ. ಉದ್ಯಾನವನದ ಆವರಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಘವು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ.
ಮುಖ್ಯಾಂಶಗಳು
- ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ತೋಟಗಾರಿಕೆ ಇಲಾಖೆ ಗಾಳಿಗೆ ತೂರಿತಾ?
- ಬೃಹತ್ ಮೇಳಗಳ ಆಯೋಜನೆಯಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆ
- ಮಾವು ಮೇಳ ಬೇರೆಡೆಗೆ ಸ್ಥಳಾಂತರಕ್ಕೆ ಒತ್ತಾಯ
ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ: ಎಸ್. ಉಮೇಶ್ ಕಿಡಿ
ಈ ಹಿಂದೆ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಉದ್ಯಾನವನವನ್ನು ಸಂರಕ್ಷಿಸಲಾಗುವುದು ಮತ್ತು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟ ಭರವಸೆ ನೀಡಿದ್ದರು. ಆದರೆ, ಇದೀಗ ತೋಟಗಾರಿಕೆ ಇಲಾಖೆಯೇ ಮೇಳ ಆಯೋಜಿಸಲು ಮುಂದಾಗಿರುವುದು ಸರ್ಕಾರದ ಭರವಸೆಗೆ ವಿರುದ್ಧವಾಗಿದೆ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಕಿಡಿಕಾರಿದ್ದಾರೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ತೋಟಗಾರಿಕೆ ಇಲಾಖೆಯು ಉದ್ಯಾನವನದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮಾವು, ಹಲಸು ಪ್ರಿಯರಿಗೆ ಈ ಬಾರಿ ಡಬ್ಬಲ್ ಧಮಾಕ! ಬೆಂಗಳೂರಿನ ಎರಡು ಕಡೆ ‘ಮಾವು ಮತ್ತು ಹಲಸಿನ ಮೇಳ’
ಕಬ್ಬನ್ ಪಾರ್ಕ್ ನಗರದ ಪ್ರಮುಖ ಮತ್ತು ಪರಿಸರ ಪರಂಪರೆಯ ತಾಣವಾಗಿದೆ. ಇದನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗ ಮಾಡುವುದು ಅದರ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿದಂತಾಗುತ್ತದೆ. ಕಬ್ಬನ್ ಪಾರ್ಕ್‌ನಲ್ಲಿ ಇಂತಹ ಬೃಹತ್ ಮೇಳಗಳನ್ನು ಆಯೋಜಿಸುವುದರಿಂದ ಜನಸಂದಣಿ ಮತ್ತು ವಾಹನ ಸಂಚಾರ ವಿಪರೀತವಾಗಿ ಹೆಚ್ಚಲಿದೆ. ಇದರಿಂದ ಉದ್ಯಾನವನದ ಸೂಕ್ಷ್ಮ ಪರಿಸರ ವ್ಯವಸ್ಥೆ ಹಾಗೂ ವನ್ಯಜೀವಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾವು ಮೇಳದಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವಿಶಾಲವಾದ ಸ್ಥಳಗಳ ಕೊರತೆಯಿಲ್ಲ. ಅರಮನೆ ಮೈದಾನದಂತಹ ಬೃಹತ್ ಸ್ಥಳಗಳು ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸೂಕ್ತವಾಗಿದೆ. ಆದರೆ ಪರಿಸರಕ್ಕೆ ಹಾನಿ ಮಾಡುವ ಉದ್ಯಾನವನವನ್ನೇ ಆರಿಸಿಕೊಂಡಿರುವುದು ಅವೈಜ್ಞಾನಿಕ ಎಂದು ಸಂಘ ದೂರಿದೆ.
ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ
ಕಬ್ಬನ್ ಪಾರ್ಕ್ ಪರಿಸರ ಸ್ನೇಹಿ ಉದ್ಯಾನವನವಾಗಿಯೇ ಉಳಿಯಬೇಕೇ ಹೊರತು ವಾಣಿಜ್ಯ ಕೇಂದ್ರವಾಗಬಾರದು. ತೋಟಗಾರಿಕೆ ಇಲಾಖೆ ಡಿಸಿಎಂ ಡಿಕೆ ಶಿವಕುಮಾರ್ ಸಾರ್ವಜನಿಕರಿಗೆ ನೀಡಿರುವ ಭರವಸೆಯನ್ನು ಗೌರವಿಸಬೇಕು. ಹೀಗಾಗಿ ಶಾಂತಿ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಎಸ್. ಉಮೇಶ್ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.