ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್ ತಂದ ಭದ್ರತೆ
ಬೆಂಗಳೂರು, ಮೇ 10: ಎರಡು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 10) ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ನಡುವೆ ನಡೆದ ಕೆಲವು ಘಟನೆಗಳು ಪ್ರಧಾನಿಗೆ ಭದ್ರತೆ ಸಂಬಂಧಿಸಿ ಪೊಲೀಸರಿಗೆ ಟೆನ್ಷನ್ ತಂದ ಪ್ರಸಂಗ ನಡೆದಿದೆ. ಒಂದು ಕಡೆ ಬ್ಲಾಸ್ಟ್ ಬೆದರಿಕೆ ಬಂದಿದ್ದರೆ ಮತ್ತೊಂದು ಕಡೆ ದಾರಿಯ ಸಮೀಪವೇ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದು, ಬೆದರಿಕೆ ಕರೆ ಮಾಡಿದ್ದು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ವ್ಯಕ್ತಿ ಎಂಬುದು ಗೊತ್ತಾಗಿದೆ. ಇನ್ನು ಜಿಲೆಟಿನ್ ಪತ್ತೆ ಪ್ರಕರಣ ಸಂಬಂಧ ತನಿಖೆಗೆ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ಪ್ರಧಾನಿ ಮೋದಿ ಭಾಗಿಯಾಗಲಿರುವ ಎರಡೂ ಕಾರ್ಯಕ್ರಮಗಳಲ್ಲಿ ಬ್ಲಾಸ್ಟ್ ಮಾಡೋದಾಗಿ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಕೋರಮಂಗಲ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕೂಡಲೇ ಅಲರ್ಟ್ ಆದ ಪೊಲೀಸರು 7.30ರ ವೇಳೆಗೆ ಲೋಹಿತ್ ಎಂಬಾತನನ್ನು ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಮಾನಸಿಕ ಅಸ್ವಸ್ಥತನ ರೀತಿ ವರ್ತನೆ ಮಾಡಿದ್ದು, ಈ ಹಿಂದೆ ದೇಶದ ಗಣ್ಯ ವ್ಯಕ್ತಿಗಳು ಆಗಮಿಸಿದಾಗಲೂ ಇದೇ ರೀತಿ ಬೆದರಿಕೆ ಕರೆ ಮಾಡಿದ್ದ ಎಂಬುದು ಗೊತ್ತಾಗಿದೆ. ಖುದ್ದು ವಿಚಾರಣೆ ನಡೆಸಿರುವ ಆಗ್ನೇಯ ವಿಭಾಗ ಡಿಸಿಪಿ ಮಹಮ್ಮದ್ ಸುಜೀತಾ, ಮೇಲ್ನೋಟಕ್ಕೆ ಈತನಿಗೆ ಬೇರೆ ಯಾವುದೇ ಲಿಂಕ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಂಚರಿಸೋ ರಸ್ತೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ; ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ
ಈ ನಡುವೆ ಬೆಳಿಗ್ಗೆ 10.30ರ ಹೊತ್ತಿಗೆ ಪ್ರಧಾನಿ ಆರ್ಟ್ ಆಫ್ ಲೀವಿಂಗ್ಗೆ ಸಾಗುವ ದಾರಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಜಗದೀಶ ಎಂಬ ಪೊಲೀಸ್ ಕಾನ್ಸ್ಟೇಬಲ್ಗೆ ತಾತಗುಣಿ ಬಳಿಯ ರಸ್ತೆ ಬಳಿ ಅಂದ್ರೆ ರಸ್ತೆಯಿಂದ ಸುಮಾರು ಮೂವತ್ತು ಮೀಟರ್ ದೂರದ ಕಾಂಪೌಂಡ್ ಬಳಿ ಅನುಮಾನಾಸ್ಪದ ಒಂದು ಕವರ್ ಗಮನಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸಿದಾಗ ಜಿಲೆಟಿನ್ ಕಡ್ಡಿಗಳು ಇರೋದು ಕಂಡುಬಂದಿದೆ. ತಕ್ಷಣ ಅವನ್ನು ವಶಕ್ಕೆ ಪಡೆದಿರುವ ಪೊಲೀಸರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಏxplosive ACT 1884 ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಪ್ರಧಾನಿ ಅಗಮಿಸುವ ಮೊದಲೇ ಸ್ಪೋಟಕ ವಸ್ತು ಪತ್ತೆಯಾದ ಹಿನ್ನಲೆ ತಕ್ಷಣ ಸಂಪೂರ್ಣ ರಸ್ತೆಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಭದ್ರತಾ ಸಮಸ್ಯೆ ಇಲ್ಲ ಎಂಬುದನ್ನು ಪಕ್ಕಾ ಮಾಡಿಕೊಳ್ಳಲಾಗಿದೆ. ಆ ಬಳಿಕವೇ ಪ್ರಧಾನಿ ಅವರನ್ನು ಅದೇ ರಸ್ತೆ ಮೂಲಕ ಕರೆತಂದು ಕಾರ್ಯಕ್ರಮ ಮುಗಿದ ಬಳಿಕ ವಾಪಸ್ಸು ಕಳಿಸಲಾಗಿದೆ. ಆರಂಭದಲ್ಲಿ ಕೋರಮಂಗಲದ ವ್ಯಕ್ತಿಗೂ ಸಿಕ್ಕ ಜಿಲೆಟಿನ್ಗೂ ಲಿಂಕ್ ಇದೆಯಾ ಎಂದು ಅನುಮಾನ ಇತ್ತು. ಆದರೆ ವಿಚಾರಣೆ ವೇಳೆ ಆತನಿಗೂ ಇದಕ್ಕೂ ಸಂಬಂಧ ಇಲ್ಲವೆಂಬುದು ದೃಢಪಟ್ಟಿದೆಯಂತೆ.
ಎರಡೂ ಘಟನೆಗಳ ಬಳಿಕ ಬೆಂಗಳೂರು ನಗರದ ಆಗ್ನೇಯ ವಿಭಾಗ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್ ನೇತ್ರತ್ವದಲ್ಲಿ ನಾಲ್ಕು ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ಆರು ತಂಡಗಳನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ಪಿ ಶ್ರೀನಿವಾಸ ಗೌಡ ರಚನೆ ಮಾಡಿದ್ದು, ಜಿಲೆಟಿನ್ ಕಡ್ಡಿಗಳು ಹೇಗೆ ಬಂತು? ಯಾರು ತಂದಿದ್ದರು? ಮತ್ತು ಯಾವ ಉದ್ದೇಶಕ್ಕೆ ತಂದಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:58 pm, Sun, 10 May 26