Headlines

ತಮಿಳುನಾಡಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳ ಬಳಿ ಇದ್ದ 717 ಮದ್ಯದಂಗಡಿ ಮುಚ್ಚಲು ವಿಜಯ್‌ ಆದೇಶ: ಸಿಎಂ ಆದ ಬೆನ್ನಲ್ಲೇ ಮಹತ್ವದ ಕ್ರಮ – Kannada News | CM Vijay Orders Closure of 717 TASMAC Liquor Shops in Tamil Nadu; First Major Move as Chief Minister

ತಮಿಳುನಾಡು ಸಿಎಂ ದಳಪತಿ ವಿಜಯ್Image Credit source: tv9

ಚೆನ್ನೈ, ಮೇ 12: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಳಪತಿ ವಿಜಯ್ (Joseph Vijay) ಮೊದಲ ಭಾಷಣದಲ್ಲೇ ರಾಜ್ಯದ ಸಾಲದ ಬಗ್ಗೆ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • ಶಾಲೆ, ದೇವಸ್ಥಾನ ಮತ್ತು ಬಸ್ ನಿಲ್ದಾಣದ ಬಳಿಯಿರುವ 717 ಮದ್ಯದ ಅಂಗಡಿಗಳು ಎರಡು ವಾರದಲ್ಲಿ ಬಂದ್.
  • ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಟಿ (VCK) ಬೆಂಬಲದೊಂದಿಗೆ ಸರ್ಕಾರ ರಚಿಸಿದ ಬಳಿಕ ವಿಜಯ್ ಮೊದಲ ನಿರ್ಧಾರ.
  • ‘ವ್ಯಸನ ಮುಕ್ತ ತಮಿಳುನಾಡು’ ನಿರ್ಮಾಣದತ್ತ ಸಿಎಂ ವಿಜಯ್ ಅವರ ಮೊದಲ ಹೆಜ್ಜೆ.

ರಾಜಕೀಯ ಹೈಡ್ರಾಮಾ ಮತ್ತು ಅಧಿಕಾರ ಸ್ವೀಕಾರ

ತಮಿಳುನಾಡಿನ 234 ಸ್ಥಾನಗಳ ಪೈಕಿ 108 ಸೀಟುಗಳನ್ನು ಗೆದ್ದ ವಿಜಯ್ ಟಿವಿಕೆ ಪಕ್ಷವು ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಎದುರಿಸಿತ್ತು. ಒಂದು ವಾರ ನಡೆದ ರಾಜಕೀಯ ಹಗ್ಗಜಗ್ಗಾಟದ ನಂತರ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷದ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.

TASMAC ಸದ್ಯ ರಾಜ್ಯಾದ್ಯಂತ 4,765 ಅಂಗಡಿಗಳನ್ನು ನಡೆಸುತ್ತಿದ್ದು, ಅದರಲ್ಲಿ ಮಂದಿರಗಳ ಸಮೀಪವಿರುವ 276, ಶಿಕ್ಷಣ ಸಂಸ್ಥೆಗಳ ಬಳಿಯಿರುವ 186 ಮತ್ತು ಬಸ್ ನಿಲ್ದಾಣಗಳ ಸಮೀಪವಿರುವ 255 ಅಂಗಡಿಗಳನ್ನು ಮುಚ್ಚಲು 2 ವಾರಗಳ ಗಡುವು ನೀಡಲಾಗಿದೆ.

ತಮಿಳುನಾಡು ಸರ್ಕಾರಕ್ಕೆ TASMAC ಸಾರಾಯಿ ಮಾರಾಟದಿಂದ ದೊಡ್ಡ ಪ್ರಮಾಣದ ಆದಾಯ ಹರಿದುಬರುತ್ತಿದೆ. 2025ರಲ್ಲಿ ರಾಜ್ಯದ ಒಟ್ಟು ಆದಾಯ 48,000 ಕೋಟಿ ರೂಪಾಯಿ ದಾಟಿತ್ತು. ಇಷ್ಟೊಂದು ದೊಡ್ಡ ಮಟ್ಟದ ಆದಾಯವಿದ್ದರೂ ವಿಜಯ್ ಅವರು ಸಾರ್ವಜನಿಕ ಹಿತಾಸಕ್ತಿಗೆ ಮಣೆ ಹಾಕಿದ್ದಾರೆ. ಕಳೆದ ವರ್ಷ ಟಾಸ್ಮಾಕ್ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಮಾರು 1,000 ಕೋಟಿ ರೂಪಾಯಿಯಷ್ಟು ಅಕ್ರಮ ಹಣದ ವಹಿವಾಟು ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಹಳೆಯ ಅಕ್ರಮಗಳಿಗೆ ಬ್ರೇಕ್

ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ TASMAC ಮದ್ಯದ ಬಾಟಲಿಗಳ ಮೇಲೆ ಅನಧಿಕೃತವಾಗಿ 10 ರಿಂದ 30 ರೂಪಾಯಿಗಳ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಇಡಿ ಮಾಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲೂ ದೊಡ್ಡ ಮಟ್ಟದ ಮೋಸ ನಡೆದಿದೆ ಎಂದು ತನಿಖಾ ಸಂಸ್ಥೆ ಹೇಳಿತ್ತು. ಈ ಎಲ್ಲ ವಿವಾದಗಳ ನಡುವೆ ಸಿಎಂ ವಿಜಯ್ ಅವರು ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ‘ವ್ಯಸನ ಮುಕ್ತ ತಮಿಳುನಾಡು’ ಎಂಬ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *