Headlines

ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು – Kannada News | Jewelers proposes 5 points to overcome gold crisis

ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಚಿನ್ನದ ಆಮದನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದ ಬೆನ್ನಲ್ಲೇ, ಆಭರಣ ವರ್ತಕರು ಮತ್ತು ಅಕ್ಕಸಾಲಿಗರ ಒಕ್ಕೂಟವು (Jewelers and Gold Smith Association) ಸರ್ಕಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಭಾರತದ ಸಂಸ್ಕೃತಿಯಲ್ಲಿ ಚಿನ್ನಕ್ಕೆ (Gold) ಇರುವ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಮದು ಕಡಿಮೆ ಮಾಡಿಯೂ ಆರ್ಥಿಕತೆಯನ್ನು ಹೇಗೆ ಸುಧಾರಿಸಬಹುದು ಎಂದು ಐದು ಮಾರ್ಗೋಪಾಯಗಳನ್ನು ಸರ್ಕಾರದ ಮುಂದಿಡಲಾಗಿದೆ. ಚಿನ್ನ ನಗದೀಕರಣ ಸ್ಕೀಮ್​ನಿಂದ ಹಿಡಿದು ಬುಲಿಯನ್ ಬ್ಯಾಂಕ್ ಸ್ಥಾಪನೆವರೆಗೆ ಸಲಹೆಗಳಿವೆ.

1. ಪ್ರತ್ಯೇಕ ‘ಬುಲಿಯನ್ ಬ್ಯಾಂಕ್’ ಸ್ಥಾಪನೆ

GIFT-IFSC ಅಥವಾ ಇಂಡಿಯಾ ಇಂಟರ್ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ ಚೌಕಟ್ಟಿನೊಳಗೆ ಒಂದು ವಿಶೇಷ ‘ಬುಲಿಯನ್ ಬ್ಯಾಂಕ್’ ಸ್ಥಾಪಿಸಬೇಕು. ಇದು ದೇಶದಾದ್ಯಂತ ಇರುವ ಚಿನ್ನವನ್ನು ಕ್ರೋಡೀಕರಿಸಲು, ಸಾಲ ನೀಡಲು ಮತ್ತು ಚಿನ್ನದ ಮಾರುಕಟ್ಟೆಯನ್ನು ಪ್ರಮಾಣೀಕರಿಸಲು ಕೇಂದ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?

2. ಚಿನ್ನದ ನಗದೀಕರಣ ಯೋಜನೆ (GMS) ಸುಧಾರಣೆ

ಭಾರತೀಯ ಕುಟುಂಬಗಳಲ್ಲಿ ಒಡವೆಗಳ ರೂಪದಲ್ಲಿ ಭಾರೀ ಪ್ರಮಾಣದಷ್ಟು ಚಿನ್ನ ಇದೆ. ಇದರಲ್ಲಿ ಬಹಳಷ್ಟು ಚಿನ್ನವು ಹಳೆಯದಾಗಿ ಬಳಕೆಯಾಗದೇ ನಿರುಪಯುಕ್ತವಾಗಿ ಬಿದ್ದಿವೆ. ಇವನ್ನು ಚಿನ್ನದ ಮಾರುಕಟ್ಟೆಯ ಹರಿವಿಗೆ ತರಲು 2015ರಲ್ಲಿ ಆರಂಭ ಮಾಡಲಾದ ಚಿನ್ನದ ನಗದೀಕರಣ ಯೋಜನೆಯು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈ ಯೋಜನೆಯಲ್ಲಿನ ರಚನಾತ್ಮಕ ದೋಷಗಳನ್ನು ಸರಿಪಡಿಸಿ, ಜನರು ತಮ್ಮಲ್ಲಿರುವ ನಿಷ್ಕ್ರಿಯ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಇಡಲು ಪ್ರೋತ್ಸಾಹಿಸಬೇಕು. ಇದರಿಂದ ಹಳೆಯ ಚಿನ್ನವೇ ಮಾರುಕಟ್ಟೆಗೆ ಮರುಬಳಕೆಯಾಗಿ ಬರುತ್ತದೆ ಮತ್ತು ಹೊಸ ಚಿನ್ನದ ಆಮದು ವರ್ಷಕ್ಕೆ 200-300 ಟನ್‌ಗಳಷ್ಟು ಕಡಿಮೆಯಾಗುತ್ತದೆ.

3. ಚಿನ್ನದ ಇಟಿಎಫ್‌ಗಳಿಂದ (Gold ETFs) ಚಿನ್ನದ ಸಾಲ

ಚಿನ್ನದ ಇಟಿಎಫ್‌ಗಳು ತಮ್ಮ ಬಳಿ ಇರುವ ಭೌತಿಕ ಚಿನ್ನದ 20-30 ಪ್ರತಿಶತದಷ್ಟನ್ನು ನಿಯಂತ್ರಿತ ಬುಲಿಯನ್ ಬ್ಯಾಂಕ್ ಚೌಕಟ್ಟಿನ ಮೂಲಕ ಸಾಲವಾಗಿ ನೀಡಲು ಅನುಮತಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಲಭ್ಯತೆ ಹೆಚ್ಚುತ್ತದೆ.

4. ಡಿಜಿಟಲ್ ಬುಲಿಯನ್ ಡೆಪಾಸಿಟ್ ಸರ್ಟಿಫಿಕೇಟ್

ಚಿನ್ನವನ್ನು ಭೌತಿಕವಾಗಿ ಹೊಂದುವ ಬದಲು ‘ಡಿಮೆಟಿರಿಯಲೈಸ್ಡ್ ಬುಲಿಯನ್ ಡೆಪಾಸಿಟ್ ಸರ್ಟಿಫಿಕೇಟ್’ಗಳನ್ನು ನೀಡಬೇಕು. ಇವುಗಳನ್ನು ಬ್ಯಾಂಕ್ ಸಾಲಗಳಿಗೆ ಅಡಮಾನವಾಗಿ (Collateral) ಬಳಸಲು ಅನುಮತಿ ನೀಡಿದರೆ, ಜನರು ಭೌತಿಕ ಚಿನ್ನ ಖರೀದಿಸುವುದು ಕಡಿಮೆಯಾಗುತ್ತದೆ.

5. ತೆರಿಗೆ ಸರಳೀಕರಣ ಮತ್ತು ರಾಷ್ಟ್ರೀಯ ಡ್ಯಾಶ್‌ಬೋರ್ಡ್

ವ್ಯವಸ್ಥೆಯೊಳಗೆ ನಡೆಯುವ ಚಿನ್ನದ ವರ್ಗಾವಣೆಗಳಿಗೆ ಜಿಎಸ್‌ಟಿ (GST) ಮತ್ತು ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಅಲ್ಲದೆ, ದೇಶದಲ್ಲಿ ಎಷ್ಟು ಚಿನ್ನ ಕ್ರೋಡೀಕರಣವಾಗುತ್ತಿದೆ ಮತ್ತು ಆಮದು ಎಷ್ಟು ಕಡಿಮೆಯಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ‘ರಾಷ್ಟ್ರೀಯ ಡ್ಯಾಶ್‌ಬೋರ್ಡ್’ ನಿರ್ಮಿಸಬೇಕು.

ಇದನ್ನೂ ಓದಿ: ಏಪ್ರಿಲ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್​ಗಿಂತ ತುಸು ಹೆಚ್ಚಳ

ಯಾಕಾಗಿ ಈ ಕ್ರಮಗಳು?

ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ. ಅಂದರೆ ಅತಿಹೆಚ್ಚು ಚಿನ್ನ ಬಳಸುವ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಸಾಲಿನಲ್ಲಿ ಚೀನಾ ಬಿಟ್ಟರೆ ಭಾರತವೇ ಅಗ್ರಪಂಕ್ತಿಯಲ್ಲಿರುವುದು. 2025-26ರಲ್ಲಿ ಭಾರತದ ಚಿನ್ನದ ಆಮದು ವೆಚ್ಚವು ದಾಖಲೆಯ 71.98 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಚಿನ್ನದ ಬೆಲೆ ಗಗನಕ್ಕೇರುತ್ತಿರುವುದರಿಂದ (10 ಗ್ರಾಂಗೆ ಸುಮಾರು 1.5 ಲಕ್ಷ ರೂ.) ವಿದೇಶಿ ವಿನಿಮಯದ ಮೇಲೆ ಭಾರಿ ಒತ್ತಡ ಬೀರುತ್ತಿದೆ. ಆಭರಣ ವರ್ತಕರ ಈ ಸಲಹೆಗಳನ್ನು ಜಾರಿಗೆ ತಂದರೆ, ವಿದೇಶಕ್ಕೆ ಹರಿದು ಹೋಗುವ ಹಣವನ್ನು ದೇಶದೊಳಗೆ ಉಳಿಸಿಕೊಳ್ಳಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *