ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC – Kannada News | KSRTC Workers Strike on May 20: Corporation Warns Employees with Strict No Work, No Pay Order

ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ನೌಕರರಿಗೆ ಕೆಎಸ್ಆರ್​ಟಿಸಿ ಖಡಕ್ ಎಚ್ಚರಿಕೆ ನೀಡಿದೆ. ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಎಸ್ಆರ್​ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಹಿನ್ನೆಲೆ
  • ನೌಕರರಿಗೆ ಕೆಎಸ್ಆರ್​ಟಿಸಿಯಿಂದ ಖಡಕ್ ಎಚ್ಚರಿಕೆ ಸಂದೇಶ
  • ಬುಧವಾರ ಮುಷ್ಕರದಲ್ಲಿ ಭಾಗಿಯಾಗದರೆ ಕ್ರಮದ ಎಚ್ಚರಿಕೆ

ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ ಮೇ 20ರಂದು ಬಸ್​ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು. ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ ‘ನೋ ವರ್ಕ್ ನೋ ಪೇ’ ಜಾರಿ ಮಾಡಿ. ಅನಿವಾರ್ಯ ಸಂದರ್ಭದಲ್ಲಿ ಅಥವಾ ಅವಶ್ಯವಿದ್ದಲ್ಲಿ, ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವಂತೆ ಅಕ್ರಂಪಾಷಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ಶಿಸ್ತಿನ ಕ್ರಮದ ಎಚ್ಚರಿಕೆ

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದ್ದು, ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ನಿಯಮಗಳನ್ವಯ ‘ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ’ ಯ ನೌಕರರ ಮುಷ್ಕರದ ನೋಟಿಸ್‌ ಸಂಬಂಧಪಟ್ಟ ವಿವಾದವು ರಾಜಿ ಸಂಧಾನದಲ್ಲಿ ರುವಾಗ ನೌಕರರು ಮುಷ್ಕರ ಹೂಡುವಂತಿಲ್ಲ. ಹೀಗಾಗಿ ನಿಗಮದ ನೌಕರರು ಯಾವುದೇ ಕಾರಣಕ್ಕೂ ಉದ್ದೇಶಿತ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು. ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:37 pm, Mon, 18 May 26

Source link

Leave a Reply

Your email address will not be published. Required fields are marked *