ನವದೆಹಲಿ, ಜನವರಿ 2: ಐದು ವರ್ಷದ ಹಿಂದೆ ದೆಹಲಿಯಲ್ಲಿ ಸಂಭವಿಸಿದ ದಂಗೆ, ಪ್ರತಿಭಟನೆಯಲ್ಲಿ ಪಿತೂರಿ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಉಮರ್ ಖಾಲೀದ್ಗೆ ಅಮೆರಿಕದಲ್ಲಿ ಈಗ ಒಂದು ಗುಂಪು ಬೆಂಬಲ ಕೊಡಲು ಯತ್ನಿಸುತ್ತಿದೆ. ಅಮೆರಿಕದ ಎಂಟು ಮಂದಿ ಜನಪ್ರತಿನಿಧಿಗಳು ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರು ಹಾಗೂ ಇತರ ಸಹ-ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಎಂಟು ಜನರು ಪತ್ರ ಬರೆದಿದ್ದಾರೆ.
ಡಿಸೆಂಬರ್ 30ರಂದು ಬರೆಯಲಾಗಿರುವ ಈ ಪತ್ರವನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಮೋಹನ್ ಕ್ವಾತ್ರ ಅವರಿಗೆ ಕೊಡಲಾಗಿದೆ. ಉಮರ್ ಖಾಲೀದ್ರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜಾಮೀನು ನೀಡಿ, ನ್ಯಾಯಯುತವಾಗಿ ವಿಚಾರಣೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ:
ನ್ಯೂಯಾರ್ಕ್ ಮೇಯರ್ ಜೋಹ್ರನ್ ಮಮ್ದಾನಿ ಅವರಿಂದಲೂ ಬೆಂಬಲ
ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಅವರ ಮಗ, ಹಾಗೂ ನ್ಯೂಯಾರ್ಕ್ ಸಿಟಿಯ ಹೊಸ ಮೇಯರ್ ಜೋಹ್ರನ್ ಮಮ್ದಾನಿ ಅವರು ಉಮರ್ ಖಾಲೀದ್ಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. ‘ನಿಮ್ಮ ಬಗ್ಗೆಯೇ ಚಿಂತಿಸುತ್ತಿದ್ದೇವೆ’ ಎಂದು ಹೇಳಿ ತಮ್ಮ ಕೈಯಿಂದಲೇ ಬರೆದ ಪತ್ರವನ್ನು ಡಿಸೆಂಬರ್ ತಿಂಗಳಲ್ಲಿ ಉಮರ್ ಖಾಲೀದ್ ಅವರ ಪೋಷಕರಿಗೆ ಕೊಟ್ಟಿದ್ದಾರೆ. ಉಮರ್ ಅವರ ಪೋಷಕರು ಅಮೆರಿಕಕ್ಕೆ ಹೋಗಿದ್ದಾಗ ಈ ಪತ್ರ ಕೊಡಲಾಗಿದೆ.
ಉಮರ್ ಖಾಲೀದ್ ಅವರ ಸಹಚರೆಯಾದ ಬನಜ್ಯೋತ್ಸ್ನಾ ಲಾಹಿರಿ ಅವರು ತಮ್ಮ ಎಕ್ಸ್ನಲ್ಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.
‘ಪ್ರಿಯ ಉಮರ್, ಜೀವನದ ಕಹಿ ಹಾಗೂ ಅದು ಸ್ವನಾಶಕ್ಕೆ ಆಸ್ಪದ ಕೊಡದೇ ತಡೆಯುವುದು ಎಷ್ಟು ಮುಖ್ಯ ಎಂದು ನೀವು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ’ ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.
ದಿಲ್ಲಿ ದಂಗೆ ಪ್ರಕರಣದಲ್ಲಿ ಉಮರ್ ಖಾಲೀದ್ ಆರೋಪಿ
ದೆಹಲಿಯ ಜೆಎನ್ಯು ಯೂನಿವರ್ಸಿಟಿಯ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರನ್ನು 2020ರ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ದಂಗೆಗೆ ಪಿತೂರಿ ನಡೆಸಿದ ಆರೋಪ ಉಮರ್ ಖಾಲೀದ್ ಹಾಗೂ ಇತರ ಕೆಲವರ ಮೇಲೆ ಇದೆ. ಐದು ವರ್ಷದಿಂದಲೂ ಅವರನ್ನು ಬಂಧನದಲ್ಲಿಡಲಾಗಿದೆ. ಡಿಸೆಂಬರ್ 16-29ರವರೆಗೆ ಅವರ ಸಹೋದರಿಯ ಮದುವೆ ನಿಮಿತ್ತ ಜಾಮೀನು ಕೊಡಲಾಗಿತ್ತು. ಡಿಸೆಂಬರ್ 29ರಿಂದಲೂ ಮತ್ತೆ ಅವರು ಬಂಧನದಲ್ಲೇ ಮುಂದುವರಿದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ