ವೈರಲ್ ಆದ ಕೆನಡಾ ವ್ಯಕ್ತಿಯ ಹೈದರಾಬಾದ್ vs ಬೆಂಗಳೂರು ರಸ್ತೆ ವಿಡಿಯೋ
ಬೆಂಗಳೂರು, ಮೇ 20: ರಾಜಧಾನಿ ಬೆಂಗಳೂರಿನ (Bengaluru) ರಸ್ತೆಗಳು ದುರಾವಸ್ಥೆ ವಿಚಾರಕ್ಕೆ ಮೇಲಿಂದ ಮೇಲೆ ಸುದ್ದಿಯಾಗುತ್ತಲೇ ಇರುತ್ತವೆ. ಈ ನಡುವೆ ಕೆನಡಾದ ವ್ಯಕ್ತಿಯೊಬ್ಬರು ಹೈದರಾಬಾದ್ ನಗರದಲ್ಲಿನ ರಸ್ತೆಗಳನ್ನು ಹೊಗಳಿ, ಅದನ್ನು ಬೆಂಗಳೂರಿನೊಂದಿಗೆ ಹೋಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನ ರಸ್ತೆಗಳು ಎಷ್ಟು ಸುಗಮ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ. ಆದರೆ ಬೆಂಗಳೂರಿನ ರೋಡ್ಗಳು ಯಾಕೆ ಹೀಗಿಲ್ಲ ಎಂದು ಪ್ರಶ್ನಿಸಿ ಕ್ಯಾಲೆಬ್ ಫ್ರೀಸೆನ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಪೋಸ್ಟ್ನಲ್ಲಿ ಏನಿದೆ?
ಹೈದರಾಬಾದ್‌ನಲ್ಲಿ ರಸ್ತೆಗಳು ಅದ್ಭುತವಾಗಿದೆ. ಬೆಂಗಳೂರಿನಲ್ಲಿ ಯಾಕೆ ಇಂತಹ ರಸ್ತೆಗಳು ಇರಲಾರವು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಈಗ ನಗರದ ಮಧ್ಯದಲ್ಲಿದ್ದೇವೆ. ಎಲ್ಲೆಡೆ ಉತ್ತಮ ರಸ್ತೆಗಳಿವೆ. ವಿವಿಧ ಪ್ರದೇಶಗಳನ್ನು ಸಂಪರ್ಕಿಸಿ ಸಂಚಾರ ಸುಲಭಗೊಳಿಸುತ್ತಿವೆ. ರಸ್ತೆಗಳು ತುಂಬಾ ಚೆನ್ನಾಗಿ ನಿರ್ಮಾಣಗೊಂಡಿವೆ. ಪಾದಚಾರಿಗಳು ಹಠಾತ್ ವಾಹನದ ಮುಂದೆ ಬರುವುದಿಲ್ಲ, ಪ್ರಾಣಿಗಳಿಲ್ಲ, ಗುಂಡಿಗಳಿಲ್ಲ. ರಸ್ತೆಗಳು ಪರಿಪೂರ್ಣ ಸ್ಥಿತಿಯಲ್ಲಿವೆ. ಬೆಂಗಳೂರಿನಲ್ಲಿ ಯಾಕೆ ಹೀಗಿಲ್ಲ? ಎಂದು ಅವರು ಪ್ರಶ್ನಿಸಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಇದನ್ನೂ ಓದಿ:
ನನ್ನ ಗಮನಕ್ಕೆ ಬಂದಂತೆ ಬೆಂಗಳೂರಲ್ಲಿ ಇರುವ ರೀತೀ ಭಾರೀ ಟ್ರಾಫಿಕ್ ಸಮಸ್ಯೆ ಇಲ್ಲಿ ಕಡಿಮೆ. ಟ್ರಾಫಿಕ್ ಇಲ್ಲ ಎಂದಲ್ಲ, ಆದರೆ ಉತ್ತಮ ರಸ್ತೆ ನಿರ್ಮಾಣದ ಮೂಲಕ ಸಮಸ್ಯೆಯನ್ನು ನಿಯಂತ್ರಿಸಲು ನಗರ ಆಡಳಿತ ಯಶಸ್ವಿಯಾಗಿದೆ. ಹೈದರಾಬಾದ್‌ನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸಾಮಾನ್ಯವಾಗಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹೈದರಾಬಾದ್ vs ಬೆಂಗಳೂರು ಎಂಬ ಹೊಸ ಚರ್ಚೆ ಶುರುವಾಗಿದೆ.
ಇನ್ನು ಹಲವರು ಫ್ರೀಸೆನ್ ಅಭಿಪ್ರಾಯವನ್ನು ಬೆಂಬಲಿಸಿದ್ದು, ಇನ್ನೂ ಕೆಲವರು ಹೋಲಿಕೆ ಸಂಪೂರ್ಣ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್‌ನ ಹಲವು ಪ್ರಮುಖ ರಸ್ತೆಗಳು ಖಂಡಿತವಾಗಿಯೂ ಉತ್ತಮವಾಗಿವೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಬೆಂಗಳೂರುಗೂ ಇಂತಹ ಯೋಜಿತ ರಸ್ತೆ ಅಭಿವೃದ್ಧಿ ತುರ್ತಾಗಿ ಬೇಕಾಗಿದೆ. ಟ್ರಾಫಿಕ್ ಅಸಹನೀಯವಾಗುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪ್ರತಿ ನಗರದಲ್ಲೂ ಒಳ್ಳೆಯ ಮತ್ತು ಕೆಟ್ಟ ರಸ್ತೆಗಳಿರುತ್ತವೆ. ನೀವು ಹೈದರಾಬಾದ್‌ನ ಉತ್ತಮ ಭಾಗಗಳಲ್ಲೇ ಸಂಚರಿಸಿದ್ದೀರಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಹಾಸ್ಯವಾಗಿ ಹೈದರಾಬಾದ್‌ನ್ನು ಇಷ್ಟು ಹೊಗಳಬೇಡಿ, ಇಲ್ಲಿಯೂ ಮನೆ ಬಾಡಿಗೆ ಏರಿಬಿಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:33 pm, Wed, 20 May 26