ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್​ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ – Kannada News | Pawan Kalyan Feels ‘Jealous’ Of Vijay’s Political Success, Addresses Comparison With TVK Chief

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗೆ ತಮಿಳು ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ತಮಿಳುನಾಡು ಸಿಎಂ ವಿಜಯ್ ಅವರ ರಾಜಕೀಯ ಯಶಸ್ಸಿನ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಜಯ್ ಅವರ ಗೆಲುವನ್ನು ನೋಡಿ ತಮಗೆ ಕೊಂಚ “ಅಸೂಯೆ” ಆಯಿತು ಎಂದು ತಮಾಷೆಯಾಗಿ ಹೇಳಿದ್ದಾರೆ.

‘ನಾನು ಇತ್ತೀಚೆಗೆ ತಮಿಳುನಾಡು ರಾಜಕೀಯವನ್ನು ಗಮನಿಸುತ್ತಿದ್ದೇನೆ. ಅವರು ಎಷ್ಟು ಆರಾಮವಾಗಿ ಚುನಾವಣೆ ಎದುರಿಸಿದರು ಎಂದರೆ ನನಗೆ ಸ್ವಲ್ಪ ಅಸೂಯೆ ಆಯಿತು. ಕಟೌಟ್‌ಗಳು ಮತ್ತು ಹೊಲೊಗ್ರಾಮ್‌ಗಳನ್ನು ಬಳಸಿಕೊಂಡು ಆರಾಮವಾಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೆ ನಾನು ಕಳೆದ 15 ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇನೆ.. ಆದರೆ’ ಎಂದು ಪವನ್ ಕಲ್ಯಾಣ್ ನಕ್ಕರು. 15 ವರ್ಷ ಹೋರಾಟ ಮಾಡಿದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಈ ಮಾತಿನ ಅರ್ಥ. ಪಕ್ಷವನ್ನು ಮುನ್ನಡೆಸಲು ಮತ್ತು ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಆಳವಾದ ಜ್ಞಾನ ಹಾಗೂ ತಳಮಟ್ಟದ ಶ್ರಮ ಬೇಕು ಎಂಬುದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ವಿಜಯ್ ಅವರ ಯಶಸ್ಸನ್ನು ತಮಗೆ ಹೋಲಿಸುತ್ತಿರುವ ಜನರಿಗೆ ಪವನ್ ಕಲ್ಯಾಣ್ ತಿರುಗೇಟು ನೀಡಿದ್ದಾರೆ. ‘ಪಕ್ಕದ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಕಟ್ಟಿ ಸಿಎಂ ಆದರು, ನೀವೂ ಆಂಧ್ರದಲ್ಲಿ ಹಾಗೆಯೇ ಮಾಡಬೇಕಿತ್ತು ಎಂದು ಹಲವರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ಪರಿಸ್ಥಿತಿಗಳು ತೀರಾ ಭಿನ್ನವಾಗಿವೆ. ಈ ಹೋಲಿಕೆ ಸರಿಯಲ್ಲ’ ಎಂದಿದ್ದಾರೆ.

2019ರ ಚುನಾವಣೆಯಲ್ಲಿ ತಮಗೆ ಎದುರಾದ ಕಠಿಣ ಸವಾಲುಗಳು ಮತ್ತು ಸ್ವಂತ ಸಚಿವರೇ ಸಾಥ್ ನೀಡದ ದಿನಗಳನ್ನು ನೆನಪಿಸಿಕೊಂಡ ಪವನ್, ‘ನಮ್ಮ ಹೋರಾಟದ ಹಾದಿಯೇ ಬೇರೆ, ದಯವಿಟ್ಟು ಯಾರೊಂದಿಗೂ ಹೋಲಿಸಬೇಡಿ’ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ರಾಜಕೀಯದಲ್ಲಿ ದಶಕಕ್ಕೂ ಹೆಚ್ಚು ಕಾಲ ಸೈಕಲ್ ಹೊಡೆದು, ಹಂತಹಂತವಾಗಿ ಬೆಳೆದು ಇಂದು ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:01 am, Wed, 27 May 26

Source link

Leave a Reply

Your email address will not be published. Required fields are marked *