ಪತಿಯೊಂದಿಗೆ ಮೃತ ಮಹಿಳೆ ಶ್ವೇತಾ Image Credit source: NDTV
ಲಕ್ನೋ, ಮೇ 27: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ(Dowry)ಗಾಗಿ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಲಕ್ನೋದಲ್ಲಿ ಮತ್ತೊಂದು ಮಹಿಳೆಯನ್ನು ಬಲಿ ಪಡೆದಿದೆ. ಮದುವೆಯಾಗಿ ಕೇವಲ ಆರೇ ತಿಂಗಳಿಗೆ ತನ್ನ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾರು ಕೊಡಿಸುವಂತೆ ಪತಿ ಮತ್ತು ಆತನ ಕುಟುಂಬದವರು ನಿತ್ಯ ಕಿರುಕುಳ ನೀಡುತ್ತಿದ್ದರು, ಅದೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಶುರುವಾಯ್ತು ನರಕಯಾತನೆ
ಮೃತ ಮಹಿಳೆಯನ್ನು ಶ್ವೇತಾ ಸಿಂಗ್ ಎಂದು ಗುರುತಿಸಲಾಗಿದೆ. ಶ್ವೇತಾ ವಿವಾಹ 2025ರ ನವೆಂಬರ್ 22ರಂದು ಭೂಪೇಂದ್ರ ಸಿಂಗ್ ಎಂಬಾತನೊಂದಿಗೆ ನಡೆದಿತ್ತು. ಶ್ವೇತಾ ಅವರ ತಂದೆ ಉಮೇಶ್ ಕುಮಾರ್ ಸಿಂಗ್ ಅವರ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆಯ ಮನೆಯವರಿಂದ ಕಿರುಕುಳ ಆರಂಭವಾಗಿತ್ತು. ಪತಿ ಭೂಪೇಂದ್ರ ಸಿಂಗ್ ಪ್ರತಿದಿನವೂ ಆಕೆಗೆ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ, ಶ್ವೇತಾಳ ಅತ್ತೆಯು ತನ್ನ ಸ್ವಂತ ಸಂಬಂಧಿಕರನ್ನು ಸೇರಿಸಿಕೊಂಡು ಆಕೆಯನ್ನು ನಿರಂತರವಾಗಿ ನಿಂದಿಸುತ್ತಿದ್ದಳು. ಇದರಿಂದಾಗಿ ಶ್ವೇತಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ?
ಲಕ್ನೋದ ಠಾಕೂರ್ಗಂಜ್ ಪ್ರದೇಶದಲ್ಲಿರುವ ಅತ್ತೆಯ ಮನೆಯಲ್ಲಿ ಶ್ವೇತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ, ಅಷ್ಟರೊಳಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶ್ವೇತಾಳ ಪೋಷಕರು ಇದನ್ನು ಆತ್ಮಹತ್ಯೆ ಎಂದು ಒಪ್ಪಲು ಸಿದ್ಧರಿಲ್ಲ. ಅತ್ತೆ-ಮಾವಂದಿರು ಕಾರಿಗಾಗಿ ಬೇಡಿಕೆ ಇಟ್ಟು ಆಕೆಯನ್ನು ಕೊಲೆ ಮಾಡಿದ್ದಾರೆ, ತದನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ನೇಣು ಹಾಕಿ ಆತ್ಮಹತ್ಯೆಯಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಹೆತ್ತವರಿಗೆ ಮರ್ಯಾದೆ ಕೊಡಲ್ಲವೆಂದು ಬೈದ ಪತಿ: ಕ್ವಾಟ್ರಸ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಾನ್ಸ್ಟೇಬಲ್ನ ಪತ್ನಿ
ಮಗಳ ಸಾವಿನಿಂದ ಕಂಗಾಲಾದ ತಂದೆ ಉಮೇಶ್ ಕುಮಾರ್ ಸಿಂಗ್ ನೀಡಿದ ಕಟ್ಟುನಿಟ್ಟಿನ ದೂರಿನ ಮೇರೆಗೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವೇತಾ ಅವರ ಪತಿ ಭೂಪೇಂದ್ರ ಸಿಂಗ್, ಮಾವ, ಅತ್ತೆ, ಮೈದುನ, ಮೈದುನನ ಪತ್ನಿ ಹಾಗೂ ನಾದಿನಿ ಸೇರಿದಂತೆ ಇಡೀ ಕುಟುಂಬದ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 80 (ವರದಕ್ಷಿಣೆ ಸಾವು), ಸೆಕ್ಷನ್ 85 (ಕ್ರೌರ್ಯ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ಗಂಭೀರ ಮೊಕದ್ದಮೆ ಹೂಡಲಾಗಿದೆ.
ಪ್ರಸ್ತುತ ಪತಿಯ ಇಡೀ ಕುಟುಂಬ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಶ್ವೇತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ಅಸಲಿ ಕಾರಣ ಬಯಲಾಗಲಿದೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:13 am, Wed, 27 May 26